ಡಿವಿಜಿ ಸುದ್ದಿ, ಬೆಂಗಳೂರು: ಅಥಣಿ, ಹಿರೇಕೆರೂರು ಜೆಡಿಎಸ್ ಅಭ್ಯರ್ಥಿಗಳು ನಾಮಪತ್ರ ವಾಪಸ್ಸು ಪಡೆದಿದ್ದರ ಬಗ್ಗೆ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಥಣಿಯ ಗುರು ದಾಶ್ಯಾಳ್, ಹಿರೇಕೆರೂರಿನಲ್ಲಿ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮಪತ್ರ ಹಿಂಡೆಯಲು ಬಿಜೆಪಿ ಮುಖಂಡರು ಒತ್ತಡ ತಂತ್ರ ಅನುಸರಿಸಿದ್ದಾರೆ. ಸ್ವಾಮೀಜಿ ಅವರನ್ನು ಚುನಾವಣೆಗೆ ನಿಲ್ಲಿ ಎಂದು ನಾವು ಕೇಳಿಕೊಂಡಿರಲಿಲ್ಲ. ಅವರೇ ಕೇಳಿದ್ದಕ್ಕೆ ಬಿ-ಫಾರಂ ಕೊಟ್ಟಿದ್ದೆವು ಎಂದರು.
ಅನೇಕ ಸ್ವಾಮೀಜಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಕರ್ನಾಟಕದಲ್ಲಿ ದೊಡ್ಡ ಅನಾಹುತ ಆಯ್ತು ಎನ್ನುವ ರೀತಿ ಬಿಂಬಿಸುವ ಮೂಲಕ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ನಾಮ ಪತ್ರ ಹಿಂಪಡೆಸಿದ್ದಾರೆ. ಸಿಎಂ ಯಡಿಯೂರಪ್ಪನವರ ಪುತ್ರ ಸಂಸದ ರಾಘವೇಂದ್ರ ನಾಯಕತ್ವದಲ್ಲಿ ಒತ್ತಡ ಹಾಕಿಸಿದ್ದಾರೆ. ಈ ಮೂಲಕ ಒಬ್ಬ ವ್ಯಕ್ತಿಯ ಸ್ವಾತಂತ್ರ್ಯ ಹರಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉಪ ಚುನಾವಣೆಯಲ್ಲಿ ಗೆಲುವು ಯಾರಿಗೆ ಅಂತಾ ಗೊತ್ತಿಲ್ಲ. ಕಾದು ನೋಡೋಣ. ಮಹಾಲಕ್ಷ್ಮಿ ಲೇಔಟ್ ನಲ್ಲಿ ಗಿರೀಶ್ ನಾಶಿ ಮನೆ ಮುಂದೆ ಇದ್ದ ಪೋಸ್ಟರ್ ಕೀಳಿಸಿದ್ದಾರೆ. ಆ ಪೋಸ್ಟರ್ ಕೀಳಿಸಿದ್ದು ಯಾರು ಅಂತ ಗೊತ್ತು. ಇದನ್ನು ಸವಾಲಾಗಿ ಸ್ವೀಕಾರ ಮಾಡುತ್ತೇನೆ, ಈ ವಿಚಾರವನ್ನು ನಾನು ವೈಯಕ್ತಿಕವಾಗಿ ತೆಗೆದುಕೊಂಡಿದ್ದೇನೆ ಎಂದ್ರು.