ದಾವಣಗೆರೆ: ಹರಿಹರ ನಗರಸಭೆಯ ಹಳೇ ತರಕಾರಿ ಮಾರುಕಟ್ಟೆಯ “ಸಿ” ವಿಭಾಗದಲ್ಲಿ ನಿವೇಶನ ಮತ್ತು ಕಟ್ಟಡವನ್ನು ತನ್‍ಜಿಂ ಖಾನ್ ಸಾರಾನೆ ಹಖ್ ಎಜುಕೇಷನ್ ಅಂಡ್ ವೆಲ್‍ಫೇರ್ ಸೊಸೈಟಿ(ರಿ) ರವರಿಗೆ ನೀಡಲು ತೀರ್ಮಾನಿಸಲಾಗಿದ್ದು, ಈ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನಿಸಲಾಗಿದೆ.
ಕಳೆದ 2006 ರಲ್ಲಿ ಹರಿಹರ ನಗರಸಭೆಯ ಹಳೇ ತರಕಾರಿ ಮಾರುಕಟ್ಟೆಯ “ಸಿ” ವಿಭಾಗದಲ್ಲಿ ಮಂಜೂರಾದ ನಗರಸಭೆಯ ನಿವೇಶನ ಮತ್ತು ಕಟ್ಟಡವನ್ನು ತನ್‍ಜಿಂಖಾನ್ ಸಾರಾನೆ ಹಖ್ ಎಜುಕೇಷನ್ ಅಂದ್ ವೆಲ್‍ಫೇರ್ ಸೊಸೈಟಿ(ರಿ) ರವರಿಗೆ ಮಾರುಕಟ್ಟೆ ಬೆಲೆ ಚದರ ಅಡಿಗೆ ರೂ. 127.50 ಗಳಂತೆ ನಿಗದಿ ಮಾಡಿ ಅದಕ್ಕೆ ಶೇ.20 ರಷ್ಟು ಸೇರಿಸಿ ಕರ್ನಾಟಕ ಪುರಸಭೆ ಕಾಯ್ದೆ ಕಲಂ 72(2)ರ ಪ್ರಕಾರ ಮಂಜೂರು ಮಾಡಿ ಆದೇಶಿಸಲಾಗಿತ್ತು. ಆದರೆ ನಿಗದಿತ ಅವಧಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವುದರಿಂದ ಸರ್ಕಾರಕ್ಕೆ ಪುನಃ ಪ್ರಸ್ತಾವನೆ ಸಲ್ಲಿಸಲಾಗಿತ್ತು.
ಮತ್ತೊಮ್ಮೆ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ, ಕೈಗೊಂಡ ನಿರ್ಧಾರಕ್ಕೆ ಸಂಬಂಧಿಸಿದಂತೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ನಿರ್ಣಯ ಕೈಗೊಂಡು, ಬಳಿಕ ಸಾರ್ವಜನಿಕರ ಆಕ್ಷೇಪಣೆ ಪಡೆದು, ಪುನಃ ಶಿಫಾರಸಿನೊಂದಿಗೆ ಪ್ರಸ್ತಾವನೆ ಸಲ್ಲಿಸುವಂತೆ ಪೌರಾಡಳಿತ ನಿರ್ದೆಶನಾಲಯ ಬೆಂಗಳೂರು ನಿರ್ದೇಶಕರು ಕಳೆದ 2021 ರ ಆಗಸ್ಟ್ 30 ರಂದು ಸೂಚನೆ ನೀಡಿರುತ್ತಾರೆ. ಅದರಂತೆ ಕಳೆದ ಅಕ್ಟೋಬರ್ 21 ರಂದು ಕೌನ್ಸಿಲ್ ಸಭೆಯಲ್ಲಿ ಮಂಡಿಸಿ, ಸಾಮಾನ್ಯ ಸಭೆಯ ವಿಷಯ ಸಂಖ್ಯೆ:12 ರಲ್ಲಿ ಹರಿಹರ ನಗರಸಭೆಯ ಹಳೇ ತರಕಾರಿ ಮಾರುಕಟ್ಟೆಯ “ಸಿ” ವಿಭಾಗದಲ್ಲಿ ನಿವೇಶನ ಮತ್ತು ಕಟ್ಟಡವನ್ನು ತನ್‍ಜಿಂ ಖಾನ್ ಸಾರಾನೆ ಹಖ್ ಎಜುಕೇಷನ್ ಅಂಡ್ ವೆಲ್‍ಫೇರ್ ಸೊಸೈಟಿ(ರಿ)ರವರಿಗೆ ನೀಡಲು ತೀರ್ಮಾನಿಸಲಾಗಿರುತ್ತದೆ.
ಈ ಕುರಿತು ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, 30 ದಿವಸದ ಒಳಗಾಗಿ ಲಿಖಿತ ರೂಪದಲ್ಲಿ ಪೌರಾಯುಕ್ತರು, ನಗರಸಭೆ, ಹರಿಹರ. ರವರಿಗೆ ಸಲ್ಲಿಸಬೇಕು. ತಪ್ಪಿದಲ್ಲಿ ಯಾವುದೇ ಆಕ್ಷೇಪಣೆ ಇಲ್ಲವೆಂದು ನಿರ್ಧರಿಸಿ, ಮೇಲೆ ತಿಳಿಸಿದ ಸಂಸ್ಥೆಗೆ ಮಂಜೂರು ಮಾಡುವ ಕ್ರಮ ವಹಿಸಲಾಗುವುದು ಎಂದು ಹರಿಹರ ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



