ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಹಾಗೂ ಓಮಿಕ್ರಾನ್ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜ.10ರಿಂದ ಹಿರಿಯ ನಾಗರಿಕರು ಮುಂಚೂಣಿ ವಾರಿಯರ್ಸ್, ಆರೋಗ್ಯ ಸೇವೆಯಲ್ಲಿ ತೊಡಗಿರುವ ಸಿಬ್ಬಂದಿಗೆ 3ನೇ ಹಂತದ ಲಸಿಕೆಯಾದ ಬೂಸ್ಟರ್ (booster vaccine) ಡೋಸ್ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎರಡು ಡೋಸ್ ಲಸಿಕೆ ಪಡೆದಿರುವ ಹಿರಿಯ ನಾಗರಿಕರು, ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯರು, ದಾದಿಯರು, ಫ್ರಂಟ್‍ಲೈನ್ ವಾರಿಯರ್ಸ್‍ಗೆ ಬೂಸ್ಟರ್ ಡೋಸ್ ನೀಡಲಾಗುವುದು. ಅದೇ ರೀತಿ ದೀರ್ಘಕಾಲದ ರೋಗಗಳಾಗಿರುವವರಿಗೂ ಡೋಸ್ ನೀಡಲಾಗುತ್ತದೆ ಎಂದರು.
ವಾರಾಂತ್ಯ ಕರ್ಫ್ಯೂ ಸೇರಿದಂತೆ ಕಠಿಣ ಮಾರ್ಗಸೂಚಿಯನ್ನು ಸರ್ಕಾರ ಯಾವುದೇ ದುರದ್ದೇಶದಿಂದ ಜಾರಿಗೆ ತಂದಿಲ್ಲ. ನಿರಂತರವಾಗಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಹರಡುವಿಕೆಯನ್ನು ತಡೆಗಟ್ಟಲು ಜಾರಿಗೆ ತರಲಾಗಿದೆ. ಹೀಗಾಗಿ ರಾಜಕೀಯ ಪಕ್ಷ, ಸಂಘಸಂಸ್ಥೆಗಳು, ಸಾರ್ವಜನಿಕರು ಸರ್ಕಾರದ ಜೊತೆ ಸಹಕರಿಸಬೇಕು. ಆರೋಗ್ಯ ತುರ್ತು ಪರಿಸ್ಥಿತಿಯ ಸಂದರ್ಭವನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಡೆಸಲು ಉದ್ದೇಶಿಸಿರುವ ಪಾದಯಾತ್ರೆ ಬಗ್ಗೆ ಮನಸ್ಸು ಬದಲಿಸುವ ನಿರೀಕ್ಷೆಯಿದೆ. ಕೋವಿಡ್ ಹೆಚ್ಚಾಗುತ್ತಿರುವ ಪರಿಸ್ಥಿತಿಯನ್ನು ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ ಅನುಭವವಿರುವವರು ಆ ಪಕ್ಷದಲ್ಲಿ ಇದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಪಾದಯಾತ್ರೆ ನಡೆಸುವ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಮಾನ್ಯಜ್ಞಾನ ಇದೆ ಎಂದು ಭಾವಿಸುತ್ತೇನೆ. ಇಲ್ಲದಿದ್ದರೆ ಕಾನೂನು ತನ್ನ ಕೆಲಸ ಮಾಡುತ್ತದೆ ಎಂದರು.



