ಬೆಂಗಳೂರು: ಜಿಲ್ಲಾಧಿಕಾರಿಗಳು ಅಧಿಕಾರ ಚಲಾಯಿಸುವುದಲ್ಲ. ಬಾಸಿಸಂ ಬಿಟ್ಟು, ಮ್ಯಾಜಿಸ್ಟ್ರೇಟ್ ರೀತಿ ಕೆಲಸ ಮಾಡಬೇಡಿ ಎಂದು ರಾಜ್ಯದ ಜಿಲ್ಲಾಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದರು.
ವಿಧಾನಸೌಧದಲ್ಲಿ ಸಿಎಂ ನೇತೃತ್ವದಲ್ಲಿ ನಡೆದ ಡಿಸಿ ಸಭೆಯಲ್ಲಿ ಮಾತನಾಡಿದ ಅವರು, ಕೆಳ ಹಂತದ ಅಧಿಕಾರಿಗಳನ್ನು ಹಿಡಿತದಲ್ಲಿಟ್ಟುಕೊಂಡಿರಬೇಕು ಎಂಬುದನ್ನು ಬಿಡಿ. ವಿವೇಚನೆ ಬಳಸಿ ಕೆಲಸ ಮಾಡಿ. ತುಂಬಾ ವಿನಯತೆ, ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾಮಾನ್ಯರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಮಟ್ಟದ ಆಡಳಿತ, ಯೋಜನೆಗಳ ಅನುಷ್ಠಾನದ ಬಗ್ಗೆ ದೀರ್ಘ ಚರ್ಚೆ ನಡೆಸಲಾಯಿತು. ಸರ್ಕಾರದ ಆಡಳಿತವನ್ನು ಜನರಿಗೆ ಇನ್ನಷ್ಟು ಹತ್ತಿರ ಕೊಂಡೊಯ್ಯುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹೊಸ ಪ್ರಯತ್ನ ನಡೆಯಲಿದೆ ಎಂದರು.
ಪ್ರವಾಹ ಪರಿಹಾರ ಸರಿಯಾಗಿ ವಿತರಿಸದ ಜಿಲ್ಲಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಸಿಎಂ, ಪರಿಹಾರ ಆ್ಯಪ್ ನಲ್ಲಿ ಅಪ್ ಲೋಡ್ ಮಾಡಿದ 48 ಗಂಟೆಗಳ ಒಳಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿಗಳ ಸಭೆಯಲ್ಲಿ ಕೊವಿಡ್ ನಿರ್ವಹಣೆ ಸಂಬಂಧ ಕೊರೊನಾ ಎದುರಿಸಲೂ ಸಹ ಪೂರ್ವ ತಯಾರಿಗೆ ಸೂಚನೆ ನೀಡಿದರು.



