ವಿಜಯಪುರ: ಮುಂದಿನ ಜನವರಿ ತಿಂಗಳಲ್ಲಿ ರಾಜ್ಯದ 40 ಲಕ್ಷ ರೈತರ ಮನೆ ಬಾಗಿಲಿಗೆ ತೆರಳಿ ಉಚಿತವಾಗಿ ಜಮಿನಿನ ಪಹಣಿ ಹಾಗೂ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಉಚಿತವಾಗಿ ವಿತರಿಸುವ ಅಭಿಯಾನ ನಡೆಯಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಹಣಿ ಮಾತ್ರವಲ್ಲ ಜಮೀನಿನ ಸಮಗ್ರ ನಕ್ಷೆ, ಪೋಡಿ ಪತ್ರ, ಪಾವತಿ ದಾಖಲೆ ಸೇರಿದಂತೆ ರೈತರ ಜಮೀನಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಉಚಿತವಾಗಿ ನೀಡುವ ಅಭಿಯಾನ ರಾಜ್ಯದಾದ್ಯಂದ ಒಂದೇ ದಿನ ನಡೆಯಲಿದೆ ಎಂದರು.
ಕೃಷಿ ಭೂಮಿಯನ್ನು ಕೃಷಿಯೇತರ ಕಾರ್ಯಕ್ಕೆ ಪರಿವರ್ತಿಸುವ ಅರ್ಜಿ ವಿಲೆಗೆ ಇದೀಗ 6-7 ತಿಂಗಳ ಕಳೆದರೂ ಸಾಧ್ಯವಾಗುತ್ತಿಲ್ಲ. ಇದರಿಂದ ಕೈಗಾರಿಕೆ, ಶೈಕ್ಷಣಿಕ ಕಟ್ಟಡಗಳ ನಿರ್ಮಾಣದಂಥ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿಯಮದಲ್ಲಿ ಅತ್ಯಂತ ಸರಳೀಕರಣ ಮಾಡಿದೆ. ಒಂದೇ ದಿನಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗೆ ಪರಿವರ್ತಿಸುವ ವ್ಯವಸ್ಥೆ ಜಾರಿಗೆ ತಂದಿದ್ದೇವೆ ಎಂದರು.
ರಾಜ್ಯದ ಜನರ ಮನೆ ಬಾಗಿಲಿಗೆ ಆಡಳಿತ ಕೊಂಡೊಯ್ಯಲು ಜಿಲ್ಲಾಧಿಕಾರಿಗಳನ್ನು ಹಳ್ಳಿಗಳತ್ತ ಕಳಿಸುತ್ತಿದ್ದೇವೆ. ಹಾಗಂತ ಇದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಂತೆ ಗ್ರಾಮ ವಾಸ್ತವ್ಯವಲ್ಲ. ಬದಲಾಗಿ 24*7 ಜನ ಸೇವೆ ನೀಡುವ ವ್ಯವಸ್ಥೆ ರೂಪಿಸಿದ್ದೇವೆ. ಜಿಲ್ಲಾಧಿಕಾರಿ ಪ್ರತಿ ಮೂರನೇ ಶನಿವಾರ ಹಳ್ಳಿಗೆ ತೆರಳುವ ಜಿಲ್ಲಾಧಿಕಾರಿಗಳು ಗ್ರಾಮೀಣ ಜನರ ಕಂದಾಯ ಇಲಾಖೆಯ ಎಲ್ಲ ಅಗತ್ಯದ ಸೇವೆಗಳನ್ನು ತ್ವರಿತವಾಗಿ ಕಲ್ಪಿಸುವುದಾಗಿದೆ ಎಂದರು.