ದಾವಣಗೆರೆ: ಮತಾಂತರ ನಿಷೇಧ ವಿಧೇಯಕ ಜಾರಿಗೆ ವಿರೋಧ ವ್ಯಕ್ತಪಡಿಸಿದ ಚಿತ್ರನಟ ಚೇತನ್, ಈ ಕಾಯ್ದೆ ಮಂಡನೆ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತಾಂತರ ನಿಷೇಧ ವಿಧೇಯಕ ಕಾಯ್ದೆ ಜಾರಿಗೆ ಮುಂದಾಗಿದ್ದಾರೆ. ಬೊಮ್ಮಾಯಿ ಕರ್ನಾಟಕ ಇತಿಹಾಸದಲ್ಲೇ ಕೋಮುವಾದಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಅವರು ಜನತಾ ಪರಿವಾರದಿಂದ ಬಂದಿದ್ದು, ಜಾತ್ಯತೀತ ವಿಚಾರಗಳಲ್ಲಿ ನಂಬಿಕೆ ಇಟ್ಟವರು. ಪ್ರಗತಿಪರ ಚಿಂತನೆಯುಳ್ಳವರು ಎಂಬ ಅಭಿಪ್ರಾಯವಿತ್ತು.ಆದರೆ, ಕಾಯ್ದೆ ಮಂಡನೆ ಗಮನಿಸಿದರೆ, ಕೋಮುವಾದಿ ಮುಖ್ಯಮಂತ್ರಿ ಎಂದೆನಿಸುತ್ತದೆ ಎಂದರು.
ಬಸವರಾಜ ಬೊಮ್ಮಾಯಿ ತಂದೆ ಹಾದಿಯಲ್ಲಿಯೇ ಬೊಮ್ಮಾಯಿ ಅವರು ಕೆಲಸ ಮಾಡುತ್ತಾರೆ ಎಂಬುದು ಸುಳ್ಳಾಗಿದೆ. ಆರ್ಎಸ್ಎಸ್ನವರು ಹೇಳಿದ ರೀತಿಯಲ್ಲಿ ಮತಾಂತರ ನಿಷೇಧ ವಿಧೇಯಕ ಜಾರಿಗೆ ಮುಂದಾಗಿರುವುಕ್ಕೆ ನಮ್ಮ ವಿರೋಧ ಇದೆ. ಮತಾಂತರ ನಿಷೇಧ ಕಾಯ್ದೆ ವಿಧೇಯಕ ಅನ್ನುವುದೇ ಅಸಂವಿಧಾನ. ಧರ್ಮ ಆಯ್ಕೆ ಮಾಡಿಕೊಳ್ಳುವುದು ಆರ್ಟಿಕಲ್ 25, 28ರಲ್ಲಿದೆ. ಹೀಗಿದ್ದಾಗ ಮತಾಂತರ ನಿಷೇಧ ಪ್ರಶ್ನೆ ಬರುವುದಿಲ್ಲ ಎಂದರು.