ದಾವಣಗೆರೆ: ಖಾಸಗಿ ಕಂಪನಿ ಪವರ್ ಲೈನ್ ಕಾಮಗಾರಿ ಸ್ಥಗಿತಕ್ಕೆ ಆಗ್ರಹಿಸಿ ಜಿಲ್ಲೆಯ ಜಗಳೂರು ತಾಲ್ಲೂಕಿನ ರೈತರು ಧರಣಿ ನಡೆಸಿದ್ದು, ಈ ವೇಳೆ ರೈತ ಮಹಿಳೆ ಹಾಗೂ ಅವರ ಪುತ್ರ ಸ್ಥಳದಲ್ಲಿಯೇ ವಿಷ ಸೇವಿಸಿದ ಘಟನೆ ನಡೆದಿದೆ.
ರೈತ ಮಹಿಳೆ ಸಿದ್ದಮ್ಮ ಶಾಂತವೀರಯ್ಯ (50) ಹಾಗೂ ಆಕೆಯ ಪುತ್ರ ಉಜ್ಜನಗೌಡ (25)ನಿಗೆ ವಿಷ ಸೇವನೆ ಮಾಡಿದ್ದು, ಜಗಳೂರು ತಾಲೂಕಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಜಗಳೂರು ತಾಲೂಕಿನ ಬಿದರಿಕೆರೆ ಗ್ರಾಮದ ರಿನ್ಯೂವ್ ಪಾವರ್ ಎಂಬ ಖಾಸಗಿ ಕಂಪನಿ, ಪವರ್ ಲೈನ್ ಕಾಮಗಾರಿ ಆರಂಭ ಮಾಡಿದೆ. ರೈತರ ಪರವಾನಿಗೆ ಪರಿಹಾರವಿಲ್ಲದೇ ಕಾಮಗಾರಿ ಆರಂಭ ಮಾಡಲಾಗಿದೆ. ಬಹುತೇಕ ಸಣ್ಣ ಹಾಗೂ ಅತಿ ಸಣ್ಣ ರೈತರ ಜಮೀನು ನಾಶವಾಗಿದೆ. ಹೀಗಾಗಿ ರೈತರು ನಿರಂತರ ಹೋರಾಟ ಮಾಡುತ್ತಿದ್ದ ಕಂಪನಿ ಮಾತ್ರ ಇದಕ್ಕೆ ಪ್ರತಿಕ್ರಿಸುತ್ತಿಲ್ಲ. ಇದರಿಂದ ನೊಂದ ರೈತ ಮಹಿಳೆ ಮತ್ತು ಆಕೆಯ ಮಗ ಧರಣಿ ಸ್ಥಳದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹಿರೇಗೌಡರ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಜಗಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.