ಡಿವಿಜಿ ಸುದ್ದಿ, ದಾವಣಗೆರೆ: ಮಹಿಳಾ ಪ್ರಧಾನಿಯಾಗಿ ದೇಶವನ್ನು ಯಶಸ್ವಿಯಾಗಿ ಮುನ್ನೆಡೆಸಿದ ಇಂದಿರಾ ಗಾಂಧಿ ಜಗತ್ತು ಕಂಡ ದಿಟ್ಟ ಮಹಿಳೆ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ ಅಭಿಪ್ರಾಯಪಟ್ಟರು.
ನಗರದ ಕೆ.ಆರ್ ಮಾರ್ಕೇಟ್ ನಲ್ಲಿ ಇರುವ ಇಂದಿರಾ ಗಾಂಧಿ ಶಾಲೆಯಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 102ನೇ ಜನ್ಮ ದಿನಾಚರಣೆ ಆಚರಿಸಿ ಮಾತನಾಡಿದರು.
ಬ್ಯಾಂಕ್ ಗಳ ರಾಷ್ಟ್ರೀಕರಣ, ಉಳುವವನೇ ಭೂಮಿ ಒಡೆಯ, 20 ಅಂಶದ ಕಾರ್ಯಕ್ರಮದ ಮೂಲಕ ಬಡವನ್ನು ಮೇಲೆತ್ತುವ ಕೆಲಸ ಮಾಡಿದರು. ಇದಲ್ಲದೆ ದೇಶದಲ್ಲಿ ಬಡತನ ನಿರ್ಮೂಲನೆಗೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದರು. ಅವರು ಪ್ರಧಾನಿಯಾದ ಕಾಲ ಸುವರ್ಣ ಯುಗದಂತಾಗಿತ್ತು. ಮಹಿಳೆಯರನ್ನು ಕೀಳಾಗಿ ಕಾಣುತ್ತಿದ್ದ ಕಾಲದಲ್ಲಿ ಮಹಿಳಾ ಶಕ್ತಿ ಏನೆಂಬುದನ್ನು ತೋರಿಸಿಕೊಟ್ಟ ಉಕ್ಕಿನ ಮಹಿಳೆ ಎಂದರು.

ದೇಶ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮುಂದುವರಿಯಲು ಇಂದಿರಾ ಗಾಂಧಿ ಅವರು ದೂರ ದೃಷ್ಟಿ ಯೋಜನೆಗಳೇ ಕಾರಣ. ನೆರೆಯ ಪಾಕಿಸ್ತಾನದೊಂದಿಗೆ ಯುದ್ಧ ಸಾರಿ ಜಯಶೀಲರಾದ ಅಪ್ರತಿಮ ಮಹಿಳಾ ಪ್ರಧಾನಿ, ದೇಶದ ಏಕಾತೆ ಮತ್ತು ಸಮಗ್ರತೆಗಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಕೆ.ಜಿ ರಹಮತ್ ಉಲ್ಲಾ, ಅಬ್ದುಲ್ ಖಾದರ್, ಎಚ್. ಹರೀಶ್, ಘಜಿಖಾನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



