ದಾವಣಗೆರೆ: ರಾಜ್ಯ ಸರ್ಕಾರದ ಆದೇಶದನ್ವಯ ಒಂದು ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸದಿದ್ರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್ ಎಸ್. ಟಿ. ವೀರೇಶ್ ಹೇಳಿದರು.
ನಗರದ ಮಂಡಿಪೇಟೆಯಲ್ಲಿ ಮೇಯರ್ ಎಸ್.ಟಿ.ವೀರೇಶ್ ನೇತೃತ್ವದಲ್ಲಿ ಕನ್ನಡ ನಾಮಫಲಕ ಅಳವಡಿಕೆ ಕುರಿತು ಜಾಗೃತಿ ಮೂಡಿಸಲಾಯಿತು. ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳ ತಂಡ ಹರ್ಡೇಕರ್ ಮಂಜಪ್ಪ ವೃತ್ತದಿಂದ ಮಂಡಿಪೇಟೆಯಲ್ಲಿರುವ ವಿವಿಧ ಅಂಗಡಿಗಳಿಗೆ ಭೇಟಿ ನೀಡಿ ರಾಜ್ಯ ಸರ್ಕಾರದ ಆದೇಶ ಪಾಲಿಸುವಂತೆ ಸೂಚನೆ ನೀಡಿದರು. ನಾಮಫಲಕದಲ್ಲಿ ಕಡ್ಡಾಯವಾಗಿ ಶೇ.70 ರಷ್ಟು ಗಾತ್ರದಲ್ಲಿ ಕನ್ನಡ ಅಕ್ಷರ ಮತ್ತು ಶೇ.30 ರಷ್ಟು ಗಾತ್ರದಲ್ಲಿ ಬೇರೆ ಭಾಷೆಯ ಅಕ್ಷರಗಳು ಇರಬೇಕು ಸೂಚಿಸಲಾಯಿತು.
ಈ ವೇಳೆ ಮೇಯರ್ ಎಸ್.ಟಿ.ವೀರೇಶ್ ಮಾತನಾಡಿ, ಅಂಗಡಿ-ಮುಂಗಟ್ಟುಗಳ ನಾಮಫಲಕದಲ್ಲಿ ಕನ್ನಡ ಅಕ್ಷರಗಳಿಗೆ ಮಹತ್ವ ನೀಡಬೇಕಾಗಿದೆ. ಹೀಗಾಗಿ ನಾಮಫಲಕ ಅಳವಡಿಸಬೇಕೆಂದು ಮೊದಲು ಜಾಗೃತಿ ಮೂಡಿಸುತ್ತಿದ್ದೇವೆ. ಇನ್ನೊಂದು ವಾರದಲ್ಲಿ ನಾಮಫಲಕವನ್ನು ಸರ್ಕಾರದ ಆದೇಶದಂತೆ ಅಳವಡಿಸದ ಅಂಗಡಿ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಎಲ್ಲಾ ಕಡೆ ಮೂರನೆ ಅಲೆ ವ್ಯಾಪಿಸುತ್ತಿದೆ. ಇನ್ನು ಓಮೈಕ್ರಾನ್ ಕೂಡ ಹರಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಈ ಬಗ್ಗೆ ಪಾಲಿಕೆಯಿಂದ ಮಾಸ್ಕ್ ಜಾಗೃತಿ ಅಭಿಯಾನವೂ ನಡೆಯುತ್ತಿದ್ದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಕೆ.ಎಂ.ವೀರೇಶ್ ಪೈಲ್ವಾನ್, ಸೋಗಿ ಶಾಂತಕುಮಾರ್, ಪಾಲಿಕೆ ಅಧಿಕಾರಿಗಳಾದ ಸಂತೋಷಕುಮಾರ್, ನಿಖಿಲ್, ರೆಹಮತ್, ನೀಲಪ್ಪ, ಶಶಿಧರ್, ಹೊನ್ನಪ್ಪ, ಮಲ್ಲಿಕಾ ಗುಡಿಕೋಟೆ, ಉಷಾ ಎಚ್ ಹಾಜರಿದ್ದರು.