ಜಗಳೂರು: ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ( ICAR Tkvk davangere) ತಾಲ್ಲೂಕಿನ ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಕಡಲೆ ಬೆಳೆಯ ಗುಚ್ಛ ಗ್ರಾಮಗಳ ಮುಂಚೂಣಿ ಪ್ರಾತ್ಯಕ್ಷಿಕೆ ಅಂಗವಾಗಿ ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.
ಕೇಂದ್ರದ ಬೇಸಾಯ ತಜ್ಞ ಮಲ್ಲಿಕಾರ್ಜುನ್ ಮಾತನಾಡಿ, ಕಡಲೆ ಬೆಳೆ ಶೇ. 50ರಷ್ಟು ಹೂ ವಾಡುವ ಸಮಯದಲ್ಲಿ ಪಲ್ಸ್ ಮ್ಯಾಜಿಕ್ ದ್ವಿದಳ ಧಾನ್ಯಗಳ ಬೆಳೆಗಳಿಗೆ ಸಿಂಪರಣೆ ಮಾಡಬೇಕು. ಪಲ್ಸ್ ಮ್ಯಾಜಿಕ್ ನಲ್ಲಿ ಪ್ರಧಾನ ಹಾಗೂ ಲಘು ಪೋಷಕಾಂಶಗಳ ಮಿಶ್ರಣದ ಜೊತೆಗೆ ಸಸ್ಯ ಪ್ರಚೋದಕ ಇರುತ್ತದೆ. 10 ಗ್ರಾಂ ಪಲ್ಸ್ ಮ್ಯಾಜಿಕ್ ಪುಡಿ ಹಾಗೂ 0.5 ಮಿಲೀ ಪ್ರತಿ ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡುವುದನ್ನು ಪದ್ಧತಿ ಪ್ರಾತ್ಯಕ್ಷಿಕೆ ಮೂಲಕ ತೋರಿಸಲಾಯಿತು. ಕಾರ್ಯಕ್ರಮದಲ್ಲಿ ಕರ್ನಾಟಕ ಯೋಜನಾ ಆಯೋಗದ ಸದಸ್ಯ ಡಾಕ್ಟರ್ ಕೆಪಿ ಬಸವರಾಜಪ್ಪ ನವರು ರೈತರೊಂದಿಗೆ ಬೆಳೆಯ ಉತ್ಪಾದನೆಯ ವೆಚ್ಚ ಹಾಗೂ ಮಾರುಕಟ್ಟೆಯ ಬಗ್ಗೆ ಚರ್ಚಿಸಿದರು.
ತರಳಬಾಳು ಕೆವಿಕೆ ಮುಖ್ಯಸ್ಥ ಡಾಕ್ಟರ್ ದೇವರಾಜ್ ಮಾತನಾಡಿ, ರೈತರಿಗೆ ವಿಜ್ಞಾನಿಗಳು ಹೇಳುವ ತಂತ್ರಜ್ಞಾನವನ್ನು ಸರಿಯಾಗಿ ಬಳಸಿ ಇಳುವರಿಯನ್ನು ಹೆಚ್ಚಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಕೇಂದ್ರದ ವಿಜ್ಞಾನಿಗಳಾದ ಜಯದೇವಪ್ಪ, ಸಣ್ಣ ಗೌಡ, ರಘುರಾಜ್ ಹಾಗೂ ಅವಿನಾಶ್ ಮತ್ತು ಕಲ್ಲೇದೇವರಪುರ ಪ್ರಗತಿಪರ ರೈತರು ಪಾಲ್ಗೊಂಡಿದ್ದರು.



