ಚಿತ್ರದುರ್ಗ: ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದ ಚಿತ್ರದುರ್ಗ ಪೊಲೀಸರು, ನ್ಯಾಯಾಲಯದ ಅನುಮತಿ ಮೇರೆಗೆ ವಾರಸುದಾರರಿಗೆ ವಾಪಾಸ್ ನೀಡಿದರು.
ಕಳೆದ 2020ರ ನವೆಂಬರ್ ನಿಂದ 2021ರ ನವೆಂಬರ್ ವರೆಗಿನ ಒಂದು ವರ್ಷದಲ್ಲಿ ದಾಖಲಾಗಿದ್ದ 65 ಕಳ್ಳತನ ಪ್ರಕರಣಗಳನ್ನು ಪೊಲೀಸರು ಬೇಧಿಸಿದ್ದಾರೆ. ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಕಾರ್ಯಕ್ರಮದಲ್ಲಿ ಸುಮಾರು 2 ಕೋಟಿಗೂ ರೂ. ಹೆಚ್ಚು ಮೌಲ್ಯದ ವಿವಿಧ ವಸ್ತುಗಳನ್ನು ವಾರಸುದಾರರಿಗೆ ನೀಡಲಾಯಿತು.
ಚಿತ್ರದುರ್ಗ ಎಸ್ಪಿ ಜಿ ರಾಧಿಕಾ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 54 ಲಕ್ಷ ಮೌಲ್ಯದ ಚಿನ್ನ, ಬೆಳ್ಳಿ, 1.39 ಕೋಟಿ ಮೌಲ್ಯದ ಅಡಿಕೆ ಹಾಗೂ ಶ್ರೀಗಂಧ, 3.81 ಲಕ್ಷ ನಗದು, 14.31ಲಕ್ಷ ಮೌಲ್ಯದ ಒಟ್ಟು 22 ದ್ವಿಚಕ್ರ ವಾಹನ, ಎರಡು ಎತ್ತುಗಳು ಸೇರಿ ವಿವಿಧ ವಸ್ತುಗಳನ್ನು ವಾರಸುದಾರರಿಗೆ ವಾಪಸ್ ನೀಡಲಾಯಿತು.
ಚಿತ್ರದುರ್ಗ ಡಿವೈಎಸ್ಪಿ ಪಾಂಡುರಂಗ, ಹಿರಿಯೂರು ಡಿವೈಎಸ್ಪಿ ರೋಷನ್ ಜಮೀರ್, ಚಳ್ಳಕೆರೆ ಡಿವೈಎಸ್ಪಿ ಶ್ರೀಧರ್ ಸೇರಿ ಇತರೆ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.



