ಬೆಂಗಳೂರು: ಹೃದಯಾಘಾತದಿಂದ ವಿಧಿವಶರಾದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯನ್ನು ಭಾನುವಾರ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ಒತ್ತಾಯದ ಮೇರೆಗೆ ನಾಳೆ ಅಂತ್ಯಕ್ರಿಯೆ ನಡೆಸಲಾಗುವುದು. ಎಲ್ಲರೂ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿದರು. ನಾಳೆಯವರೆಗೆ ಅಭಿಮಾನಿಗಳಿಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ ಎಂದು ತಿಳಿಸಿದರು.
ಅಂತಿಮ ದರ್ಶನಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಅಭಿಮಾನಿಗಳು, ಕನ್ನಡ, ತೆಲುಗು ಚಿತ್ರರಂಗದ ಗಣ್ಯರು ಆಗಮಿಸಿ ಕಂಬನಿ ಮಿಡಿದಿದ್ದಾರೆ. ತೆಲುಗಿನ ಪ್ರಖ್ಯಾತ ನಟರಾದ ಜೂನಿಯರ್ ಎನ್ ಟಿಆರ್, ನಂದಮೂರಿ ಬಾಲಕೃಷ್ಣ ಅವರು ಶನಿವಾರ ಅಂತಿಮ ದರ್ಶನ ಪಡೆದು ಕಣ್ಣೀರಿಟ್ಟಿದ್ದಾರೆ.
ಇನ್ನು ಅಮೆರಿಕಾದಿಂದ ದೆಹಲಿಗೆ ಬಂದಿಳಿದಿರುವ ಪುನೀತ್ ಅವರ ಪುತ್ರಿ ಧೃತಿ, ಏರ್ ಇಂಡಿಯಾ ವಿಮಾನದಲ್ಲಿ ಬೆಂಗಳೂರಿಗೆ ಆಗಮಿಸುತ್ತಿದ್ದು, ಸಂಜೆ ಅವರು ನೇರವಾಗಿ ಕಂಠೀರವ ಸ್ಟೇಡಿಯಂ ಗೆ ಆಗಮಿಸಲಿದ್ದಾರೆ. ನಾಳೆ ಸಕಲ ಸರಕಾರಿ ಗೌರವಗಳೊಂದಿಗೆ ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಡೆಯಲಿದೆ.