ದಾವಣಗೆರೆ: ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿರೋದು ಮಕ್ಕಳಿಗೆ ಪಾಠ ಮಾಡಲಿಕ್ಕೆ ಹೊರತು, ಸಂಸಾರ ನೋಡಿಕೊಳ್ಳೋಕೆ ಅಲ್ಲ ಎಂದು ಶಿಕ್ಷಕರ ವರ್ಗಾವಣೆ ಪ್ರಶ್ನೆಗೆ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಗರಂ ಆಗಿ ಉತ್ತರಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ವರ್ಷದಿಂದ ವರ್ಗಾವಣೆ ಪ್ರಕ್ರಿಯೆ ನಿಲ್ಲಿಸಲಾಗಿತ್ತು. ಎರಡು ದಿನದಿಂದ ಮತ್ತೆ ಶುರುವಾಗಿದ್ದು, ಎಲ್ಲ ಶಿಕ್ಷಕರು ಸಂತೋಷದಿಂದ ಇದ್ದಾರೆ. ಕೆಲ ಶಿಕ್ಷಕರ ವೈಯುಕ್ತಿಕ ಸಮಸ್ಯೆಗಳನ್ನ ಸಾಮೂಹಿಕ ಎಂದು ಬಿಂಬಿಸುತ್ತಿದ್ದಾರೆ. ಶಿಕ್ಷಕರಿಗೆ ಕೆಲಸಕ್ಕೆ ಸೇರುವಾಗ ಜಿಲ್ಲಾವಾರು ಆಯ್ಕೆ ಎಂದು ಗೊತ್ತಿರಲಿಲ್ಲವೇ? ಎಂದು ಪ್ರಶ್ನಿಸಿದರು.
ಶಿಕ್ಷಕರ ಸಮಸ್ಯೆಗಿಂತ ಮೊದಲು ಮಕ್ಕಳ ಸಮಸ್ಯೆ ಬಗೆಹರಿಸಬೇಕಿದೆ. ಬಳಿಕ ಜಿಲ್ಲಾವಾರು ಶಿಕ್ಷಕರ ಸಮಸ್ಯೆ ಬಗೆಹರಿಸುತ್ತೇವೆ. ಶಿಕ್ಷಣ ಕ್ಷೇತ್ರಕ್ಕೆ ಕೋವಿಡ್ ಸವಾಲಾಗಿದ್ದು, ಕೋವಿಡ್ 3ನೇ ಅಲೆ ಪರಿಣಾಮ ಬಗ್ಗೆ ಆಮೇಲೆ ನಿರ್ಧಾರ ಮಾಡಲಾಗುತ್ತದೆ. ಸದ್ಯಕ್ಕೆ ತೊಂದರೆ ಇಲ್ಲ. ಶಾಲೆಗಳು ಪ್ರಾರಂಭ ಆಗಿದೆ ಎಂದರು.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ಒಂದು ಪತ್ರವು ನಮಗೆ ಬಂದಿಲ್ಲ. ವಿರೋಧ ಇದ್ದರೆ ತಿಳಿಸಿ. ಎನ್ಇಪಿಯಲ್ಲಿ ಮಾತೃ ಭಾಷೆಗೆ ಹೆಚ್ಚು ಒತ್ತು ನೀಡಲಾಗಿದೆ ಎಂದು ತಿಳಿಸಿದರು.



