ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿದ್ದಾರೆ. ಮೂವರ ಸ್ಥಿತಿ ತೀರ ಗಂಭೀರವಾಗಿದೆ.
ಹೆದ್ದಾರಿ ಬದಿಯಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಬುಧವಾರ ಮುಂಜಾನೆ ಕಾರೊಂದು ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಸೇರಿ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದವರು ವಿಜಯಪುರ ನಗರದವರು ಎಂದು ಗುರುತಿಸಲಾಗಿದೆ.
ಕಾರಿನಲ್ಲಿ 6 ಮಂದಿ ಪ್ರಯಾಣಿಸುತ್ತಿದ್ದರು. ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಯನ್ನ ದುರಸ್ತಿ ಮಾಡುತ್ತಾ ಚಾಲಕ ನಿಂತಿದ್ದ. ವೇಗವಾಗಿ ಬಂದ ಕಾರು ಲಾರಿಗೆ ಡಿಕ್ಕಿ ಹೊಡೆದಿದೆ. ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಕಾರು ಸಂಪೂರ್ಣ ನಜ್ಜುಗುಜ್ಜಾಗಿ ಬಿದ್ದಿದೆ. ಲಾರಿ ಚಾಲಕ, ಕಾರಿನಲ್ಲಿದ್ದ ಒಬ್ಬ ಪುರುಷ, ಒಬ್ಬ ಮಹಿಳೆ ಹಾಗೂ ಒಂದು ಮಗು ಸಾವನ್ನಪ್ಪಿದೆ. ಇನ್ನು ಕಾರಿನಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ಧಾರೆ.



