ದಾವಣಗೆರೆ: ಹಾನಗಲ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ (hangal by election) ಕಣ ರಂಗೇರಿದ್ದು, ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ (cm basavaraj bommai) ಅಖಾಡಕ್ಕೆ ಇಳಿದಿದ್ದಾರೆ. ಈ ಮೂಲಕ ಬಿಜೆಪಿ ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನವೊಲಿಸಿದ್ದಾರೆ.
ಸಿಎಂ ನಿನ್ನೆ ರಾತ್ರಿಯೇ ಜಿಎಂಐಟಿ (gmit ) ಅತಿಥಿಗೃಹಕ್ಕೆ ಬಂದಿದ್ದು, ಬಂಡಾಯ ಅಭ್ಯರ್ಥಿ ಮನವೊಲಿಸಿದ್ದಾರೆ. ಸಭೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡರನ್ನು ಕರೆಸಿಕೊಂಡು ಮಾತುಕತೆ ನಡೆದಿದ್ದಾರೆ.
ಸಭೆಯಲ್ಲಿ ಸಂಸದರಾದ ಜಿ.ಎಂ. ಸಿದ್ದೇಶ್ವರ, ಶಿವಕುಮಾರ ಉದಾಸಿ, ಸಚಿವರಾದ ಸುನಿಲ್ ಕುಮಾರ್, ಬಿ.ಸಿ. ಪಾಟೀಲ, ಮುನಿರತ್ನ ಸಹಿತ ಹಲವರು ಬಾಗಿಯಾಗಿದ್ದರು. ಇಂದು ಬೆಳಿಗ್ಗೆ ಪಂಚಮಸಾಲಿ ಸಮುದಾಯದ ಮುಖಂಡರ ಜತೆ ಹಾಗೂ ರಾಣೆಬೆನ್ನೂರು ಶಾಸಕ ಅರುಣಕುಮಾರ್ ಪೂಜಾರ್ ಜೊತೆ ಚರ್ಚೆ ನಡೆಸಿದರು.
ಬಂಡಾಯ ಅಭ್ಯರ್ಥಿ ಸಿ.ಆರ್. ಬಳ್ಳಾರಿ ಜಿಎಂಐಟಿ ಅತಿಥಿ ಗೃಹದಲ್ಲಿ ಮುಕ್ಕಾಲು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಸಿ.ಆರ್. ಬಳ್ಳಾರಿ ಅವರು ಉಮೇದುವಾರಿಕೆ ವಾಪಸ್ ತೆಗೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ನಾಳೆ ಸಮಾಜದ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಸಿ.ಆರ್. ಬಳ್ಳಾರಿ ತಿಳಿಸಿದ್ಧಾರೆ ಮಾಹಿತಿ ಲಭ್ಯವಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಎರಡು ವಿಚಾರಗಳಿಗಾಗಿ ದಾವಣಗೆರೆಗೆ ಬಂದಿದ್ದೇನೆ. ದಾವಣಗೆರೆ ಮುಖಂಡರನ್ನು ಭೇಟಿಯಾಗಿ ಕೆಲವು ವಿಚಾರಗಳ ಬಗ್ಗೆ ಮಾತನಾಡಬೇಕಿತ್ತು. ಅದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರನ್ನು, ಮುಖಂಡರನ್ನು ಕರೆಸಿ ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡಿದ್ದೇನೆ. ಇದಲ್ಲದೆ ಹಾವೇರಿ ಉಪ ಚುನಾವಣೆ ಗೆಲ್ಲುವ ಕಾರ್ಯತಂತ್ರ ರೂಪಿಸಿದ್ದೇವೆ ಎಂದರು.
ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, ಸಿ.ಆರ್. ಬಳ್ಳಾರಿ ಅವರು ನಾಮಪತ್ರ ಹಿಂತೆಗೆದುಕೊಳ್ಳುವ ವಿಶ್ವಾಸವಿದೆ. ನಾಳೆ ಸಂಜೆ ನಿಮಗೆ ಗೊತ್ತಾಗಲಿದೆ ಎಂದರು.