ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಕುತೂಹಲ ಕೆರಳಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ನಾಳೆ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಘಟಾನುಘಟಿಗಳ ಭವಿಷ್ಯ ಹೊರ ಬೀಳಲಿದೆ. ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ನಡೆಯಲಿದ್ದು, ಮಧ್ಯಾಹ್ನದ ಹೊತ್ತಿಗೆ ಸ್ಪಷ್ಟ ಫಲಿತಾಂಶ ಹೊರ ಬೀಳಿಲಿದೆ.
45 ವಾರ್ಡ್ ನ ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರು ಸೇರಿದಂತೆ ಒಟ್ಟು208 ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಅದ್ರಲ್ಲೂ ಭಾರಿ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಘಟನುಘಟಿ ಅಭ್ಯರ್ಥಿಗಳ ಎದೆಬಡಿತ ಜೋರಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾನೇರ ಹಣಾಹಣಿ ನಡೆದಿದ್ದು, ಉಭಯ ಪಕ್ಷಗಳ ನಾಯಕರುಗಳಿಗೂ ಫಲಿತಾಂಶ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ದಾವಣಗೆರೆ ಹಳೇ ಪಿ.ಬಿ ರಸ್ತೆಯ ರಾಜನಹಳ್ಳಿ ಪ್ರಾಥಮಿಕ ಮತ್ತು ಪ್ರೌಢಶಾಲೆ (ಡಿ,ಆರ್.ಆರ್ ಶಾಲೆ) ಯಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಮತ ಎಣಿಕೆಯ ಕಾರ್ಯಕ್ರಮಕ್ಕೆ ಪ್ರತಿ ವಾರ್ಡಿಗೆ ಒಂದರಂತೆ ಒಟ್ಟು 45 ಟೇಬಲ್‍ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಚುನಾವಣಾಧಿಕಾರಿಗೆ 5 ಟೇಬಲ್‍ಗಳನ್ನು ನೀಡಲಾಗುವುದು.
ಮತ ಎಣಿಕೆ ಕಾರ್ಯಕ್ಕೆ 63 ಮೇಲ್ವಿಚಾರಕರು ಹಾಗೂ 63 ಸಹಾಯಕರನ್ನು ನೇಮಿಸಲಾಗಿದೆ. ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಕೆ ಮಾಡಲಾಗುವುದು ನಂತರ ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆ ಪ್ರಾರಂಭವಾಗಲಿದೆ.
ನಗರದ ಡಿ ಆರ್ ಆರ್ ಹೈಸ್ಕೂಲ್ ನಲ್ಲಿ ಮತಪೆಟ್ಟಿಗೆಗಳನ್ನ ಮಸ್ಟರಿಂಗ್ ಮಾಡಲಾಗಿದೆ. ಇವಿಎಂ ಪೆಟ್ಟಿಗೆ ವ್ಯಾಪಕ ಭದ್ರತೆ ವದಗಿಸಲಾಗಿದ್ದು, ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಓಪನ್ ಆಗಲಿದೆ. ಫಲಿತಾಂಶದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ
ಫಲಿತಾಂಶ ಹೊರಬೀಳುವ ಹಿನ್ನೆಲೆಯಲ್ಲಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಮತ್ತು ಶಾಂತಿ ಸುವ್ಯವಸ್ಥೆ ಸಲುವಾಗಿ ಮಹಾನಗರಪಾಲಿಕೆ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 6 ರಿಂದ ನ.15 ರ ಬೆಳಿಗ್ಗೆ 6 ಗಂಟೆವರೆಗೆ ಸಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ. ಈ ಸಮಯದಲ್ಲಿ ಮೆರವಣಿಗೆ, ಅಕ್ರಮ ಗುಂಪು ಸೇರುವಿಕೆ, ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ.



