ದಾವಣಗೆರೆ: ರಾಜ್ಯ ಸರ್ಕಾರ ನಾಳೆಯೊಳಗೆ (ಅ.1) ಪಂಚಮಸಾಲಿ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸದಿದ್ದರೆ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮತ್ತೆ ಹೋರಾಟ ಪ್ರಾರಂಭಿಸಲಾಗುವುದು ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ. 1 ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಮಾಜಿ ಮುಖ್ಯಮಂತ್ರಿ ಜೆ.ಎಚ್.ಪಟೇಲ್ ಅವರ ಜನ್ಮದಿನದ ಜೊತೆಗೆ ಸಮಾಜ ಬಾಂಧವರ ಸಭೆ ನಡೆಯಲಿದೆ. ಈ ವೇಳಗೆ ಸಮಾಜಕ್ಕೆ ಪ್ರವರ್ಗ-2 ಎ ಮೀಸಲಾತಿ ಸೌಲಭ್ಯ ಒದಗಿಸುವ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದಲ್ಲಿ ಭಾರತೀಯ ವಿದ್ಯಾಭವನದಿಂದ ನೇರವಾಗಿ ಫ್ರೀಡಂ ಪಾರ್ಕ್‌ಗೆ ತೆರಳಿ ಮತ್ತೆ ಧರಣಿ ಪ್ರಾರಂಭಿಸಲಾಗುವುದು ಎಂದರು.
ಸಭೆಗೆ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಗಮಿಸಿ ಸ್ಪಷ್ಟ ನಿರ್ಧಾರ ತಿಳಿಸಲಿ ಅಥವಾ ಸರ್ಕಾರದ ಪ್ರತಿನಿಧಿ ಮೂಲಕವಾದರೂ ತಿಳಿಸಲಿ. ಒಟ್ಟನಲ್ಲಿ ಶುಕ್ರವಾರದ ಮಧ್ಯಾಹ್ನದ ವೇಳೆಗೆ ಸರ್ಕಾರ ಸ್ಪಷ್ಟ ನಿರ್ಧಾರವನ್ನು ತಿಳಿಸಲೇಬೇಕು. ಇಲ್ಲದಿದಲ್ಲಿ ಮತ್ತೆ ಧರಣಿ ಅನಿವಾರ್ಯ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೋನ್ ಬಲ್ಲಿ ಮಾತನಾಡಿ 2 ಎ ಮೀಸಲಾತಿ ನೀಡುವ ಭರವಸೆ ನೀಡಿದ್ಧಾರೆ. ಇದಲ್ಲದೆ, ಸಚಿವ ಸಿ.ಸಿ. ಪಾಟೀಲ್ ತಾಯಿ ಚೆನ್ನಮ್ಮನ ಆಣೆಯಾಗಿ ಮೀಸಲಾತಿ ನೀಡಿಯೇ ನೀಡಲಾಗುವುದು ಎಂದಿದ್ದಾರೆ. ಇದರಿಂದ ಸರ್ಕಾರದ ಮೇಲೆ ಭರವಸೆ ಇದ್ದು, ಮೀಸಲಾತಿ ನೀಡುವ ವಿಶ್ವಾಸವುದೆ ಎಂದರು.
ಶೇ. 99 ರಷ್ಟು ಯಶಸ್ವಿಯಾಗಿದ್ದೇವೆ. ಶೇ.1 ರಷ್ಟು ಬಾಕಿ ಇದೆ.ಕೆಲವರು ಎಸಿ ರೂಂಗಳಲ್ಲಿ ಕುಳಿತು ಹೋರಾಟ ಮಾಡುತ್ತಾರೆ. ಕೆಲವರು ಬೀದಿಗಿಳಿದು ಹೋರಾಟ ಮಾಡುತ್ತಾರೆ. ನಾವು ನಮ್ಮ ಸಮಾಜದ ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. 20 ವರ್ಷಗಳ ಕಾಲ ಮುಖ್ಯಮಂತ್ರಿಗಳ ಭೇಟಿಯಾಗುವುದು, ಮನವಿ ಸಲ್ಲಿಸುವುದಕ್ಕೆ ನಮ್ಮ ಹೋರಾಟ ಸೀಮಿತವಾಗಿತ್ತು. ಮೀಸಲಾತಿ ಹೋರಾಟಕ್ಕೆ ಜನಾಂದೋಲನದ ರೂಪ ಪಡೆದಿದೆ. ಪಂಚಮಸಾಲಿ ಸಮಾಜಕ್ಕೆ 2 ಮೀಸಲಾತಿ ಜತೆ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಇದರಿಂದ ಇತರೆ ಸಮಾಜದವರಿಗೆ ತೊಂದರೆ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.