ದಾವಣಗೆರೆ: ನೀರಿನ ಸಂರಕ್ಷಣಾ ತಂತ್ರಜ್ಞಾನಗಳಾದ ಕಂದಕ ಮತ್ತು ಬದು, ಚೆಕ್‌ಡ್ಯಾಂ ಮತ್ತು ಕೃಷಿ ಹೊಂಡಗಳ ನಿರ್ಮಾಣದಿಂದಾಗಿ ಬೆಳೆಗಳ ಸಂದಿಗ್ದ ಪರಿಸ್ಥಿತಿಯಲ್ಲಿ ನೀರು ನೀಡಲು ಅನುಕೂಲವಾಗಲಿದೆ. ಜತೆಗೆ ಅಂತರ್ಜಲ ವೃದ್ಧಿಯೂ ಆಗಲಿದೆ ಎಂದು ಬೇಸಾಯ ತಜ್ಞ ಬಿ.ಓ. ಮಲ್ಲಿಕಾರ್ಜುನ ಹೇಳಿದರು.
ನಗರದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಹವಾಮಾನ ವೈಪರೀತ್ಯಕ್ಕೆ ಚೇತರಿಕೆಯುಕ್ತ ಕೃಷಿ ಬಗ್ಗೆ ರೈತರ-ವಿಜ್ಞಾನಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಳೆದ 10 ವರ್ಷಗಳಿಂದ ಅನುಷ್ಟಾನಗೊಂಡ ಹವಾಮಾನ ಚೇತರಿಕೆಯುಕ್ತ ಕೃಷಿ ತಂತ್ರಜ್ಞಾನಗಳ ಯೋಜನೆಯು ಸಿದ್ದನೂರು, ಅಗಸನಕಟ್ಟೆ ಮತ್ತು ಪವಾಡರಂಗವ್ವನಹಳ್ಳಿ ಗ್ರಾಮಗಳಲ್ಲಿ ರೈತರನ್ನು ಜಾಗೃತಿಗೊಳಿಸಿದ್ದಲ್ಲದೆ, ಚೇತರಿಕೆಯುಕ್ತ ತಂತ್ರಜ್ಞಾನಗಳಾದ ಅದರಲ್ಲೂ ಬರನಿರೋಧಕ ತಳಿಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಕೆವಿಕೆ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ರವರು ಮಾತನಾಡಿ ಪ್ರಪಂಚದಲ್ಲಾಗುತ್ತಿರುವ ಹವಾಮಾನ ಬದಲಾವಣೆ ಮುಂಬರುವ ದಿನಗಳಲ್ಲಿ ನಮ್ಮ ಬೆಳೆಗಳ ಇಳುವರಿಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಕಾಲಿಕ ಮಳೆ ಇದಕ್ಕೆ ಕನ್ನಡಿ ಹಿಡಿದಹಾಗಿದೆ. ಇದಕ್ಕೆ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕೆಂದು ಕರೆಕೊಟ್ಟರು. ಈ ಸಂದರ್ಭದಲ್ಲಿ ಬರನಿರೋಧಕ 35 ತಳಿಗಳನ್ನು ಬಿಡುಗಡೆ ಮಾಡಿ ದೇಶದ ರೈತರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದನ್ನು ನೇರ ಪ್ರಸಾರ ಮಾಡಲಾಯಿತು.



