ದಾವಣಗೆರೆ: ಕೊರೊನಾ ಸೋಂಕು ತಡೆಗಟಗ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ದಾವಣಗೆರೆ ನಗರದಲ್ಲಿ ಇಂದು ಬೃಹತ್ ಲಸಿಕಾ ಮೇಳೆ ಆಯೋಜಿಸಲಾಗಿತ್ತು. ವಿದ್ಯಾನಗರದ ಶಿವ ಪಾರ್ವತಿ ದೇವಸ್ಥಾನದಲ್ಲಿಏರ್ಪಡಿಸಿದ್ದ ಲಸಿಕಾಕರಣ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರು ಭಾಗವಹಿಸಿ, ಫಲಾನುಭವಿಗಳ ಯೋಗಕ್ಷೇಮ ವಿಚಾರಿಸಿದರು.
ನಗರದ ಮೋತಿವೀರಪ್ಪ ಕಾಲೇಜು ಹಾಗೂ ಸೂಪರ್ ಮಾರ್ಕೆಟ್ ಕೇಂದ್ರಗಳಲ್ಲಿ ಸಂಸದರೊಂದಿಗೆ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮುಂತಾದ ಅಧಿಕಾರಿಗಳು ಭೇಟಿ ನೀಡಿ ಲಸಿಕೆ ಮೇಳ ವೀಕ್ಷಿಸಿದರು.
ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರಪಂಚದಲ್ಲೇ ಅತೀ ದೊಡ್ಡ ವ್ಯಾಕ್ಸಿನೇಷನ್ ಮೇಳ ಇದಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಮ್ಮ ಸರ್ಕಾರ ಜನರ ಹಿತಕ್ಕೆ ಬದ್ಧವಾಗಿದೆ ಎಂದರು.
ಜಿಲ್ಲೆಯ 195 ಗ್ರಾಮ ಪಂಚಾಯಿತಿಗಳಲ್ಲಿ ಹಾಗೂ ಪಟ್ಟಣ ಪಂಚಾಯಿತಿ, ನಗರ ಸಭೆ, ವ್ಯಾಪ್ತಿಯಲ್ಲಿ 5 ರಿಂದ 6 ಕಡೆ ಕೋವಿಡ್ ನಿರೋಧಕ ಲಸಿಕೆ ಹಾಕಲಾಗುತ್ತಿದ್ದು, ದಾವಣಗೆರೆ ನಗರದ ಒಟ್ಟು 57 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ನಗರದ 45 ವಾರ್ಡ್ ಹಾಗೂ ಸಿ.ಜಿ. ಆಸ್ಪತ್ರೆಯಲ್ಲಿ ವ್ಯಾಕ್ಸಿನೇಷನ್ ನೀಡುತ್ತಿದ್ದು, ಜಿಲ್ಲೆಯ 582 ಕೇಂದ್ರಗಳಲ್ಲಿ ಯಶಸ್ವಿ ಲಸಿಕಾ ಮೇಳ ನಡೆಯಿತು.
ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಕನಿಷ್ಠ 200 ರಿಂದ 500 ಜನರಿಗೆ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದ್ದು, ಶುಕ್ರವಾರ ಒಂದೇ ದಿನ ಒಟ್ಟು 01 ಲಕ್ಷ ಲಸಿಕೆ ನೀಡುವ ಗುರಿ ಹೊಂದಿದ್ದೇವೆ. ಈಗಾಗಲೇ 10 ಲಕ್ಷದ 52 ಸಾವಿರ ಜನರಿಗೆ ಲಸಿಕೆ ನೀಡಲಾಗಿದ್ದು,11.5 ಲಕ್ಷದ ಗುರಿ ಸಾಧಿಸಲು ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಶ್ರಮಿಸುತ್ತಿದೆ ಎಂದರು.



