ದಾವಣಗೆರೆ: ಕೋವಿಡ್-19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಸೂಚನೆಯಂತೆ ಸೆ. 17 ರಂದು ದಾವಣಗೆರೆ ತಾಲ್ಲೂಕಿನಲ್ಲಿ ಬೃಹತ್ ಲಸಿಕಾ ಮೇಳ ಆಯೋಜಿಸಲಾಗಿದ್ದು, ಅಂದು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆ, ಮಹಾನಗರಪಾಲಿಕೆಯ ಎಲ್ಲ 45 ವಾರ್ಡ್‍ಗಳು, ತಾಲ್ಲೂಕಿನ 42 ಗ್ರಾಮ ಪಂಚಾಯತ್‍ಗಳು, ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರಗಳಲ್ಲಿ ಒಟ್ಟು 36850 ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಸರ್ಕಾರವು ಕೋವಿಡ್ ಸೋಂಕು ತಡೆಗಟ್ಟುವ ದಿಸೆಯಲ್ಲಿ ಸೆ. 17 ರಂದು ವಿಶೇಷವಾಗಿ ಬೃಹತ್ ಲಸಿಕಾ ಮೇಳ ಆಯೋಜಿಸಿ, ಹೆಚ್ಚಿನ ಜನರಿಗೆ ಕೋವಿಡ್ ನಿರೋಧಕ ಲಸಿಕೆ ನೀಡುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ತಾಲ್ಲೂಕಿನಲ್ಲಿ ಇದೇ ಮೊದಲ ಬಾರಿಗೆ ಅತಿ ಹೆಚ್ಚು ಡೋಸ್ ಕೋವಿಶೀಲ್ಡ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹ ವ್ಯಕ್ತಿಗಳು ಮೊದಲ ಹಾಗೂ ಎರಡನೆ ಡೋಸ್ ಲಸಿಕೆಯನ್ನು ಹಾಕಿಸಿಕೊಳ್ಳಬಹುದಾಗಿದೆ. ಸಾರ್ವಜನಿಕರು ಲಸಿಕೆ ಪಡೆಯಲು ತೊಂದರೆಯಾಗದ ರೀತಿಯಲ್ಲಿ ಇದೇ ಮೊದಲ ಬಾರಿಗೆ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತಿ, ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರ ಆರೋಗ್ಯ ಉಪಕೇಂದ್ರಗಳು, ಜಿಲ್ಲಾ ಆಸ್ಪತ್ರೆ ಅಲ್ಲದೆ ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ ಪ್ರತಿಯೊಂದು ವಾರ್ಡ್‍ನಲ್ಲಿಯೂ ನಿಗದಿತ ಸ್ಥಳದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತಲಾ 100 ಡೋಸ್‍ನಂತೆ ಒಟ್ಟು 2750, 09 ನಗರ ಆರೋಗ್ಯ ಉಪಕೇಂದ್ರಗಳಲ್ಲಿ ತಲಾ 300 ರಂತೆ ಒಟ್ಟು 2700 ಡೋಸ್, 42 ಗ್ರಾಮ ಪಂಚಾಯತ್‍ಗಳಿಗೆ ತಲಾ 200 ರಂತೆ ಒಟ್ಟು 8400 ಡೋಸ್, ಜಿಲ್ಲಾ ಆಸ್ಪತ್ರೆಯಲ್ಲಿ 500 ಡೊಸ್, ದಾವಣಗೆರೆ ಮಹಾನಗರಪಾಲಿಕೆ ವ್ಯಾಪ್ತಿಯ 45 ವಾರ್ಡ್‍ನಲ್ಲಿ ತಲಾ 500 ಡೋಸ್ ನಂತೆ ಒಟ್ಟು 22500 ಡೋಸ್ ಸೇರಿದಂತೆ ಒಟ್ಟಾರೆ 36850 ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಸೆ. 17 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ನಿಗದಿತ ಸ್ಥಳದಲ್ಲಿ ನೀಡಲಾಗುವುದು. ಇದುವರೆಗೂ ಲಸಿಕೆ ಪಡೆಯದೇ ಇರುವ 18 ವರ್ಷ ಮೇಲ್ಪಟ್ಟವರು ಮೊದಲನೆ ಡೋಸ್ ಹಾಗೂ ಈಗಾಗಲೆ ಮೊದಲ ಡೋಸ್ ಪಡೆದು ನಿಗದಿತ ಅವಧಿ ಪೂರ್ಣಗೊಂಡವರು ಎರಡನೆ ಡೋಸ್ ಲಸಿಕೆಯನ್ನು ಪಡೆಯಬಹುದಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ತಿಳಿಸಿದ್ದಾರೆ.



