ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಂಜನೇಯ ಬಡಾವಣೆಯ 40 ನೇ ವಾರ್ಡ್ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಬಿಜೆಪಿಯಿಂದ ಮಾಜಿ ಸಚಿವ ರವೀಂದ್ರನಾಥ್ ಪುತ್ರಿ ವೀಣಾ ನಂಜಪ್ಪ ಸ್ಪರ್ಧೆಗೆ ಇಳಿದಿದ್ದು, ಕಾಂಗ್ರೆಸ್ ನಿಂದ ಮಾಜಿ ಉಪ ಮೇಯರ್ ನಾಗರತ್ನಮ್ಮ ಸ್ಪರ್ಧೆಯಲ್ಲಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ನಾಗರತ್ನಮ್ಮ ಬೆಳಗ್ಗೆಯಿಂದಲೇ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ಆಂಜನೇಯ ಬಡಾವಣೆ, ಸ್ವಾಮಿ ವಿವೇಕಾನಂದ ಬಡಾವಣೆ ಹಾಗೂ ವಿನಾಯಕ ಬಡಾವಣೆಯ ಮನೆ ಮನೆಗಳಿಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವಂತೆ ಮನವಿ ಮಾಡಿಕೊಂಡರು.

ಈ ಪ್ರಚಾರದ ಮಧ್ಯೆ ಡಿವಿಜಿ ಸುದ್ದಿ ಜೊತೆ ಮಾತನಾಡಿದ ಅವರು, ಉಪಮೇಯರ್ ಆದ ಅವಧಿಯಲ್ಲಿ ಮತ್ತು ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ. ಇನ್ನಷ್ಟು ಅಭಿವೃದ್ಧಿ ಕಾರ್ಯ ಮಾಡುವ ಉದ್ದೇಶದಿಂದ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ.

ನಮ್ಮ ಪ್ರತಿ ಸ್ಪರ್ಧೆ ಯಾರು ಎಂಬುದು ಮುಖ್ಯವಲ್ಲ.ಅಭಿವೃದ್ದಿ ಕಾರ್ಯಗಳೇ ನಮಗೆ ಶ್ರೀ ರಕ್ಷೆಯಾಗಲಿವೆ. ನಮ್ಮ ಕೆಲಸ ಮೆಚ್ಚಿ ಪಕ್ಷದ ವರಿಷ್ಠರಾದ ಶಾಮನೂರು ಶಿವಶಂಕರಪ್ಪ ಅವರು ಟಿಕೆಟ್ ನೀಡಿದ್ದಾರೆ. ಅವರ ಭರವಸೆಯನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದರು.



