ಡಿವಿಜಿ ಸುದ್ದಿ, ಹರಪನಹಳ್ಳಿ: ಹೈದ್ರಾಬಾದ್ ಕರ್ನಾಟಕ ವಿಶೇಷ ಸ್ಥಾನಮಾನದ ರೂವಾರಿ, ಮಾಜಿ ಸಚಿವ ವೈಜನಾಥ ಪಾಟೀಲ್ ಅವರ ಹೆಸರಿನಲ್ಲಿ ಕಲ್ಯಾಣ ಕರ್ನಾಟಕ ನೀರಾವರಿ ಮಂಡಳಿ ರಚಿಸಬೇಕು ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಮಠದ ಪೀಠಾಧ್ಯಕ್ಷ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.
ಗಂಗಾವತಿಗೆ ತೆರಳುತ್ತಿದ್ದ ವೇಳೆ ಪಟ್ಟಣದ ಸಮತಾ ಹೋಟೆಲ್‌ನಲ್ಲಿರುವ ಪೆರಿಯಾರ್ ಮತ್ತು ಎಂ.ಪಿ.ಪ್ರಕಾಶ್ ಸೇವಾ ಸಂಸ್ಥೆ ಕಚೇರಿಯಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಭಾಗಕ್ಕೆ 371ಜೆ ಕಲಂ ಸೌಲಭ್ಯ ಪಡೆಯಲು ವೈಜನಾಥ ಪಾಟೀಲರು ತಮ್ಮ ಬದುಕನ್ನೇ ಮುಡುಪಾಗಿ ಇಟ್ಟಿದ್ದರು. ಹೀಗಾಗಿ ಅವರಿಗೆ ಸೂಕ್ತ ಗೌರವ ಸಲ್ಲಿಸುವುದು ಸರ್ಕಾರದ ಕರ್ತವ್ಯ ಎಂದರು.
ಹೈದ್ರಬಾದ್ ಕರ್ನಾಟಕ ಪ್ರದೇಶಕ್ಕೆ ಕಲ್ಯಾಣ ಕರ್ನಾಟಕವೆಂದು ಮರು ನಾಮಕರಣ ಮಾಡುವ ಮೂಲಕ ಸರ್ಕಾರ ಈ ಭಾಗದ ಜನರ ಕನಸು ನನಸು ಮಾಡಿದೆ. ಇದರ ಜೊತೆಗೆ ಕಲ್ಯಾಣ ಕರ್ನಾಟಕ ನಿರೀಕ್ಷಿತ ಅಭಿವೃದ್ದಿಗೆ ನಾನಾ ಯೋಜನೆಗಳನ್ನು ಜಾರಿಗೊಳಿಸಬೇಕಿದೆ. ಕಲ್ಯಾಣ ಕರ್ನಾಟಕ ನಿರೀಕ್ಷಿತ ಅಭಿವೃದ್ದಿ ಕಂಡಿಲ್ಲ. ಬಸವ ಕಲ್ಯಾಣದಲ್ಲಿ ವಿಶೇಷ ಅಧಿವೇಶನ ಕರೆದು ಅಭಿವೃದ್ದಿ ಪರ್ವಕ್ಕೆ ನಾಂದಿ ಹಾಡಬೇಕು. ತೆಲಂಗಾಣ ಮಾದರಿಯಲ್ಲಿ ಕೃಷ್ಣಾ, ಭೀಮ ನದಿ ನೀರನ್ನು ಕೆರೆಗಳಿಗೆ ತುಂಬಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೆರಿಯಾರ್ ಮತ್ತು ಎಂ.ಪಿ.ಪ್ರಕಾಶ್ ಸೇವಾ ಸಂಸ್ಥೆವತಿಯಿಂದ ಶ್ರೀಗಳನ್ನು ಸನ್ಮಾನಿಸಲಾಯಿತು.
ಪೆರಿಯಾರ್ ಮತ್ತು ಎಂ.ಪಿ.ಪ್ರಕಾಶ್ ಸೇವಾ ಸಂಸ್ಥೆ ರಾಜ್ಯ ಗೌರವಾಧ್ಯಕ್ಷ ಕೋಡಿಹಳ್ಳಿ ಭೀಮಪ್ಪ, ಮುಖಂಡರಾದ ಶಂಕ್ರಯ್ಯ, ಇಮ್ರಾನ್, ಅಲ್ತಾಫ್ ಇತರರು ಇದ್ದರು.