ಡಿವಿಜಿ ಸುದ್ದಿ, ದಾವಣಗೆರೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಬುಧವಾರ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಅಯೋಜಿಸಿದ್ದ ಮಹಾತ್ಮ ಗಾಂಧಿಜಿಯವರ 150 ನೇ ವರ್ಷಾಚರಣೆ ಅಂಗವಾಗಿ ಗಾಂಧಿಜಿ ಅವರ ಜೀವನ ಮತ್ತು ಸಾಧನೆ ಕುರಿತ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಉದ್ಘಾಟಿಸಿದರು.
ಈ ಅಪರೂಪದ ಛಾಯಾಚಿತ್ರ ಪ್ರದರ್ಶನದಲ್ಲಿ ಗಾಂಧೀಜಿಯವರ ಬಾಲ್ಯ, ಹರೆಯ, ದೇಶ ವಿದೇಶಗಳಲ್ಲಿ ಅಂದಿನ ಹಲವಾರು ಛಾಯಾಗ್ರಾಹಕರು ಗಾಂಧೀಜಿಯವರನ್ನು ಸೆರೆಹಿಡಿದ ಹತ್ತು ಸಾವಿರಕ್ಕೂ ಅಧಿಕ ಛಾಯಾಚಿತ್ರಗಳಲ್ಲಿ ನೂರು ಛಾಯಾಚಿತ್ರಗಳನ್ನು ಆಯ್ಕೆ ಮಾಡಿ ಗಾಂಧೀಜಿ ಅವರ ಜೀವನ, ವ್ಯಕ್ತಿತ್ವ ಮತ್ತು ಕಾರ್ಯಗಳನ್ನು ಪ್ರತಿಬಿಂಬಿಸುವಂತಹ ಮೂಲ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು.

ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಸತ್ಯಾಗ್ರಹ, ಹೋರಾಟ, ಕರ್ನಾಟಕದಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ದಿನ ಹಾಗೂ ಸ್ಥಳದ ಮಾಹಿತಿ, ಅವರ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು, ಸ್ವತಂತ್ರ ಭಾರದ ಮೊದಲ ದಿನದ ಚಿತ್ರಗಳು, ಅವರ ಅಂತಿಮ ದಿನಗಳ ಮಾಹಿತಿ ಪ್ರದರ್ಶನದಲ್ಲಿದ್ದು, ಇದಲ್ಲದೆ ಗಾಂಧೀಜಿಯ ಎರಡು ವಿಭಿನ್ನ ಭಂಗಿಯ ಪ್ರತಿಕೃತಿಗಳು ಸಾರ್ವಜನಿಕರ ಮುಖ್ಯ ಆಕರ್ಷಣೆ ಆಗಿದ್ದವು.
ಪ್ರದರ್ಶನದಲ್ಲಿ ಈ ಬಾರಿ ಕೇವಲ ಛಾಯಾಚಿತ್ರ ಫಲಕಗಳು ಮಾತ್ರವಲ್ಲದೆ ಎಲ್ಇಡಿ ಟಿವಿಯನ್ನು ಅಳವಡಿಸಿ ಗಾಂಧೀಜಿಯವರ ಜೀವನ ಚರಿತ್ರೆ, ಹೋರಾಟ ಸೇರಿದಂತೆ ಇತರೆ ಕಾರ್ಯಗಳನ್ನು ಪ್ರದರ್ಶಿಸಲಾಗಿದೆ. ಬಸ್ ನಿಲ್ದಾಣದಲ್ಲಿನ ಸಾರ್ವಜನಿಕರು, ವಿದ್ಯಾರ್ಥಿಗಳು, ಕೆಎಸ್ಆರ್ಟಿಸಿ ಸಿಬ್ಬಂದಿಗಳು ಸೇರಿದಂತೆ ಇತರರು ಪ್ರದರ್ಶನವನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಕೆಎಸ್ಆರ್ಟಿಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ ಹೆಬ್ಬಾರ್, ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಿ.ಅಶೋಕ್ಕುಮಾರ್ ಸೇರಿದಂತೆ ಕೆಎಸ್ಆರ್ಟಿಯ ವಿವಿಧ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



