ದಾವಣಗೆರೆ: ಸದ್ಯ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 06 ಕೆ.ಎಲ್. ಸಾಮರ್ಥ್ಯದ ಆಕ್ಸಿಜನ್ ಘಟಕ ಸ್ಥಾಪಿಸಲಾಗಿದ್ದು, ಇದರಿಂದ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. 13 ಕೆ.ಎಲ್. ಸಾಮರ್ಥ್ಯದ ಇನ್ನೊಂದು ಆಮ್ಲಜನಕ ಘಟಕ ಸ್ಥಾಪನೆಗೆ ಮಂಜೂರಾತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಮಂಜೂರಾತಿ ಪತ್ರಕ್ಕಾಗಿ ಕಾಯದೆ, 13 ಕೆ.ಎಲ್ ಸಾಮರ್ಥ್ಯದ ಆಮ್ಲಜನಕ ಘಟಕ ಸ್ಥಾಪನೆಗೆ ಬೇಕಾದ ಎಲ್ಲ ಪ್ರಕ್ರಿಯೆಗಳನ್ನು ನೀವು ಪ್ರಾರಂಭಿಸಿ. ಇದಕ್ಕೆ ಸಂಪೂರ್ಣ ಅಧಿಕಾರವನ್ನು ನಿಮಗೇ ಕೊಡುತ್ತಿದ್ದೇನೆ ಎಂದರು.ಜಿಲ್ಲಾಧಿಕಾರಿ ಮಾತನಾಡಿ, 13 ಕೆ.ಎಲ್. ಸಾಮರ್ಥ್ಯದ ಘಟಕ ತಕ್ಷಣದಲ್ಲಿ ದೊರೆಯುವುದು ಕಷ್ಟ. ಇವು ಗುಜರಾತ್‍ನಲ್ಲಿ ಮಾತ್ರ ಉತ್ಪಾದನೆಯಾಗುತ್ತವೆ, ಆದರೂ ಸಂಬಂಧಪಟ್ಟವರಿಂದ ಮಾಹಿತಿ ಪಡೆದು, ಆದಷ್ಟು ಶೀಘ್ರ ಘಟಕ ಸ್ಥಾಪನೆಗೆ ಪ್ರಾಮಾಣಿಕ ಯತ್ನ ಮಾಡಲಾಗುವುದು ಎಂದರು.ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಪ್ರತಿಕ್ರಿಯಿಸಿ, 13 ಕೆ.ಎಲ್. ಸಾಮರ್ಥ್ಯದ ಘಟಕ ದೊರೆಯುವುದು ಕಷ್ಟವಿದ್ದಲ್ಲಿ, 06 ಕೆ.ಎಲ್. ಸಾಮರ್ಥ್ಯ ಎರಡು ಘಟಕ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು.




