ದಾವಣಗೆರೆ: ದಾವಣಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿನ ಸಾರ್ವಜನಿಕ ರಸ್ತೆಗಳು, ಸಾರ್ವಜನಿಕ ಉದ್ಯಾನವನಗಳು ಅಥವಾ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಲು ನಿರ್ಮಿಸಿರುವುದು ಅಥವಾ ನಿರ್ಮಾಣ ಮಾಡುತ್ತಿರುವುದು ಕಂಡುಬಂದಲ್ಲಿ ಈ ಕುರಿತ ಮಾಹಿತಿಯನ್ನು ಸಾರ್ವಜನಿಕರು ಸಂಬಂಧಪಟ್ಟ ಗ್ರಾಮ ಪಂಚಾಯತಿ ಪಿಡಿಒ ಗಳಿಗೆ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹಾಗೂ ತಹಸಿಲ್ದಾರರಿಗೆ ಒದಗಿಸುವಂತೆ ತಹಸಿಲ್ದಾರ್ ಬಿ.ಎನ್. ಗಿರೀಶ್ ಮನವಿ ಮಾಡಿದ್ದಾರೆ.
ಉಚ್ಛ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂ: 27551/2019 ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಿದ ಬಗ್ಗೆ ವಾರದೊಳಗಾಗಿ ಸರ್ಕಾರದ ಮೂಲಕ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಲಾಗಿದೆ. ಸರ್ಕಾರದ 2010 ರ ಆದೇಶದಂತೆ ಸಾರ್ವಜನಿಕ ಸ್ಥಳಗಳಲ್ಲಿ ದಿ: 29-09-2009 ಕ್ಕೆ ಮುಂಚಿತವಾಗಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳನ್ನು ಆ ಪ್ರದೇಶದ ಪ್ರಶಾಂತತೆಗೆ ಭಂಗವುಂಟು ಮಾಡುವುದಿಲ್ಲವೆಂದು ಖಚಿತಪಟ್ಟಲ್ಲಿ, ಅಮತಹ ನಿರ್ಮಾಣಗಳನ್ನು ಕೆಟಿಸಿಪಿ ಕಾಯ್ದೆ, ಮುನಿಸಿಪಾಲಿಟಿ ಕಾಯ್ದೆ, ಪುರಸಭೆ ಕಾಯ್ದೆ ಮತ್ತು ಇತರೆ ಸ್ಥಳೀಯ ಕಾನೂನು ಕಾಯ್ದೆಗಳಿಗೆ ವ್ಯತಿರಿಕ್ತವಾಗಿಲ್ಲದಿದ್ದಲ್ಲಿ, ಅವುಗಳನ್ನು ಉಳಿಸಿಕೊಂಡು ಕಾನೂನು ಕಾಯ್ದೆಗೊಳಪಟ್ಟಂತೆ ಅಧಿಕೃತಗೊಳಿಸಬಹುದಾಗಿದೆ.
ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಗ್ರಾಮ, ಓಣಿ, ಮೊಹಲ್ಲಾ, ಕೇರಿ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ನಿರ್ಮಾಣವಾಗಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು ಮತ್ತು ನಿರ್ಮಾಣವಾಗದಂತೆ ಎಚ್ಚರ ವಹಿಸಬೇಕು. ಒಂದು ವೇಳೆ ತೆರವುಗೊಳಿಸದೇ ಇದ್ದಲ್ಲಿ ಇಂತಹ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತಾಲ್ಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ತೆರವುಗೊಳಿಸಲಿದ್ದು, ಈ ಕಾರ್ಯಾಚರಣೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು.
ಅನಧಿಕೃತವಾಗಿ ನಿರ್ಮಿಸಲಾಗಿರುವ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಯಾವುದೇ ಕಾರಣಕ್ಕೂ ಪ್ರತಿರೋಧ ವ್ಯಕ್ತಪಡಿಸದೆ, ಸಹಕಾರ ನೀಡಬೇಕು. ಒಂದು ವೇಳೆ ಕಾರ್ಯಾಚರಣೆಗೆ ಯಾರಾದರೂ ಅಡ್ಡಿಪಡಿಸಲು ಅಥವಾ ತಡೆಯೊಡ್ಡಲು ಮುಂದಾದಲ್ಲಿ, ಅಂತಹವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು ಎಂದು ದಾವಣಗೆರೆ ತಹಸಿಲ್ದಾರ್ ಬಿ.ಎನ್. ಗಿರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.