ದಾವಣಗೆರೆ: ಕೊರೊನಾ ಲಸಿಕೆ ಪಡೆಯಲು ಆನ್ ಲೈನ್ ನೋಂದಣಿ ಕಡ್ಡಾಯವಾಗಿದೆ. ಲಸಿಕಾ ಕೇಂದ್ರಕ್ಕೆ ನೋಂದಣಿ ಪ್ರತಿ ತರತಕ್ಕದ್ದು. ಪ್ರಸ್ತುತ 45 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆಯನ್ನು ನೀಡಲಾಗುತ್ತಿದ್ದು, 18 ವರ್ಷದಿಂದ 45 ವರ್ಷದೊಳಗಿನವರಿಗೆ ಲಸಿಕಾಕರಣವನ್ನು ಮಾಡುವ ದಿನಾಂಕವನ್ನು ಮುಂದೆ ತಿಳಿಸಲಾಗುವುದೆಂದು ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದೆ.
ಮೋತಿ ವೀರಪ್ಪ ಕಾಲೇಜಿನ ಆವರಣದಲ್ಲಿ ನಡೆಯುತ್ತಿದ್ದ ಲಸಿಕಾಕರಣ ವ್ಯವಸ್ಥೆಯನ್ನು ಇನ್ನು ಮುಂದೆ ಚಿಗಟೇರಿ ಆಸ್ಪತ್ರೆಯ ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಕೊಠಡಿ ಸಂಖ್ಯೆ 34ರಲ್ಲಿ ಲಸಿಕಾಕರಣವನ್ನು ಮಾಡಲಾಗುವುದು. ಇದರ ಜೊತೆಗೆ ಜಿಲ್ಲೆಯಾದ್ಯಂತ ಪ್ರತಿಯೊಂದು ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಉಪಕೇಂದ್ರಗಳು ಹಾಗೂ ದಾವಣಗೆರೆ ನಗರದಲ್ಲಿರುವ ಚಾಮರಾಜಪೇಟೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಕೋವಿಡ್-19 ಲಸಿಕಾಕರಣ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.



