ದಾವಣಗೆರೆ: ಒಂದು ವಾರಕ್ಕೆ ಆಗುವಷ್ಟು ತರಕಾರಿಯನ್ನು ಒಮ್ಮೆಲೇ ತೆಗೆದುಕೊಂಡು ಹೋಗಿ. ಪ್ರತಿ ದಿನ ಮಾರುಕಟ್ಟೆಗೆ ಬರಬೇಡಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.
ಜಿಲ್ಲಾಸ್ಪತ್ರೆಯ ಆಕ್ಸಿಜನ್ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಜನರು ಒಂದು ವಾರಕ್ಕೆ ಆಗುವಷ್ಟು ತರಕಾರಿಯನ್ನು ಒಮ್ಮಲೇ ತೆಗೆದುಕೊಂಡು ಹೋಗುತ್ತಾರೆ. ಅದೇ ರೀತಿ ನಗರ ಪ್ರದೇಶದ ಜನರು ಕೂಡ ಒಂದು ವಾರಕ್ಕೆ ಆಗುವಷ್ಟು ತರಕಾರಿಯನ್ನು ಒಮ್ಮೆಲೇ ತೆಗೆದುಕೊಂಡು ಹೋಗಬೇಕು. ಪ್ರತಿದಿನ ಮಾರುಕಟ್ಟೆಗೆ ಬರಬೇಡಿ. ಇದರಿಂದ ಒಂದಿಷ್ಟು ಜನ ದಟ್ಟಣಿ ಕಡಿಮೆಯಾಗಿ, ಕೊರೊನಾ ನಿಯಂತ್ರಿಸಲು ಸಾಧ್ಯವಾಗಲಿದೆ ಎಂದರು.
ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಇದರಿಂದ ಹೆಚ್ಚು ಹೆಚ್ಚು ಕೇಸ್ ಗಳು ಬರುತ್ತಿವೆ. ನಿನ್ನೆ 4ಕ್ಕೂ ಹೆಚ್ಚು ಕೇಸ್ ಗಳು ದಾಖಲಾಗಿದ್ದು, 6 ಜನ ಸಾವನ್ನಪ್ಪಿದ್ದಾರೆ. ಕೊರೊನಾ ಎಲ್ಲ ಕಡೆ ಹರಡಿದ್ದು, ಜನರು ಸ್ವಯಂ ನಿಯಂತ್ರಣ ಕೈಗೊಳ್ಳಬೇಕು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು, ಸಂದಸರು ಚರ್ಚಿಸಿದ್ದು, ಕರ್ಫ್ಯೂ ಸಡಿಲವಾಗದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಪೊಲೀಸರು ಸಹ ಎಲ್ಲ ಕಡೆ ಬಂದೋಬಸ್ತ್ ಕೈಗೊಂಡಿದ್ದಾರೆ ಎಂದರು.