ಬೆಂಗಳೂರು: ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 10 ನಗರ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ನಾಳೆ ನಡೆಯಲಿದೆ.
10 ನಗರ ಸ್ಥಳೀಯ ಸಂಸ್ಥೆಗಳಿಗೆ ಏ. 27ರಂದು ಸಾರ್ವತ್ರಿಕ ಚುನಾವಣೆ ನಡೆದಿತ್ತು. ಆಯಾ ನಗರ ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನದಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ ವೇಳೆಗೆ ಅಧಿಕೃತ ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.
ಬಳ್ಳಾರಿ ಮಹಾನಗರ ಪಾಲಿಕೆಯ 39 ವಾರ್ಡ್ ಗಳಲ್ಲಿ ಶೇ.56.19 ರಷ್ಟು, ವಿಜಯಪುರ ಪುರಸಭೆಯ 25 ವಾರ್ಡ್ ಗಳಲ್ಲಿ ಶೇ.79.53 ರಷ್ಟು, ರಾಮನಗರ ನಗರಸಭೆಯ 31 ವಾರ್ಡ್ ಗಳಲ್ಲಿ ಶೇ. 75ರಷ್ಟು ಹಾಗೂ ಚನ್ನಪಟ್ಟಣ ನಗರಸಭೆಯ 31 ವಾರ್ಡ್ ಗಳಲ್ಲಿ ಶೇ.73.10ರಷ್ಟು ಮತದಾನವಾಗಿತ್ತು ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
ಗುಡಿಬಂಡೆ ಪಟ್ಟಣ ಪಂಚಾಯ್ತಿಯ 11 ವಾರ್ಡ್ ಗಳಲ್ಲಿ ಶೇ.71.60, ಭದ್ರಾವತಿ ನಗರಸಭೆಯ 35 ವಾರ್ಡ್ ಗಳಲ್ಲಿ ಶೇ.62.54, ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯ 15 ವಾರ್ಡ್ ಗಳಲ್ಲಿ ಶೇ.76.33, ಬೇಲೂರು ಪುರಸಭೆಯ 23 ವಾರ್ಡ್ ಗಳಲ್ಲಿ ಶೇ.83.30, ಬೀದರ್ ನಗರಸಭೆಯ 35 ವಾರ್ಡ್ ಗಳಲ್ಲಿ ಶೇ.52 ಹಾಗೂ ಮಡಿಕೇರಿ ನಗರಸಭೆಯ 23 ವಾರ್ಡ್ ಗಳಲ್ಲಿ ಶೇ.59.01 ರಷ್ಟು ಮತದಾನವಾಗಿದೆ ಎಂದು ಆಯೋಗದ ಪ್ರಕಟಣೆ ತಿಳಿಸಿದೆ. ಉಪಚುನಾವಣೆ ನಡೆದ ಹಳ್ಳಿಖೇಡ ಪುರಸಭೆಯ 11 ವಾರ್ಡ್ ಗಳಲ್ಲಿ ಶೇ.83.10 ಹಾಗೂ ಹಿರೇಕೆರೂರು ಪಟ್ಟಣ ಪಂಚಾಯ್ತಿಯ ಒಂದು ವಾರ್ಡ್ ನಲ್ಲಿ ಶೇ.76.77ರಷ್ಟು ಮತದಾನವಾಗಿದೆ



