ದಾವಣಗೆರೆ: ನಿನ್ನೆ ರಾತ್ರಿ ಸುರಿದ ಮಳೆಗೆ ಮಹಾನಗರ ಪಾಲಿಕೆ ಎದುರಿನ ರೈಲ್ವೆ ಅಂಡರ್ ಬ್ರಿಡ್ಜ್ ನಲ್ಲಿ ನೀರು ತುಂಬಿದ್ದರಿಂದ ಸಾರ್ವಜನಿಕರ ಓಡಾಡಕ್ಕೆ ತುಂಬಾ ತೊಂದರೆ ಉಂಟಾಗಿತ್ತು. ನಿನ್ನೆ ರಾತ್ರಿಯೇ ಸ್ಥಳ ದಿಢೀರ್ ಭೇಟಿ ನೀಡಿದ್ದ ಮೇಯರ್ ಎಸ್.ಟಿ. ವೀರೇಶ್, ಇಂದು ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಪಾಲಿಕೆ ಇಂಜಿನಿಯರ್ ಹಾಗೂ ರೈಲ್ವೆ ಇಲಾಖೆ ಇಂಜಿನಿಯರ್ ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ನಂತರ ಮಾತನಾಡಿದ ಮೇಯರ್ ಎಸ್. ಟಿ .ವೀರೇಶ್, ಈ ಸಮಸ್ಯೆ ಬಹಳ ವರ್ಷಗಳಿಂದ ಇದ್ದು, ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎನ್ನುವ ಉದ್ದೇಶದಿಂದ ನಿನ್ನೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೆ, ಇಂದು ಅಧಿಕಾರಿಗಳು, ಇಂಜಿನಿಯರ್ ಗಳೊಂದಿಗೆ ಮತ್ತೆ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಪರಿಸೀಲಿಸಿದ್ದೇನೆ. ಸಣ್ಣ ಮಳೆ ಬಂದರೂ ಇಲ್ಲಿ ನೀರು ನಿಂತು ಸಮಸ್ಯೆ ಉಂಟಾಗುತ್ತಿದೆ. ಇಲ್ಲಿ ಮುಖ್ಯವಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಇದ್ದಂತ ಒಳಚರಂಡಿಯಲ್ಲಿ ಕಸ ತುಂಬಿಕೊಂಡಿದೆ. ಇದನನ್ನು ನಾಳೆಯೇ ಪೌರ ಕಾರ್ಮಿಕರು ಸ್ವಚ್ಛಗೊಳಿಸಲಿದ್ದಾರೆ. ಇನ್ನು ಮಳೆ ಬಂದರೆ ಸೆನ್ಸಾರ್ ಮೂಲಕ ನೀರು ಪಂಪ್ ಮಾಡಲು ಮೋಟರ್ ಅಳವಡಿಸಿ ನೀರನ್ನು ಹೊರ ಹಾಕುವ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ಸಮಸ್ಯೆ ಬಗ್ಗೆ ರೈಲ್ವೆ ಇಲಾಖೆಗೆ ಅನೇಕ ಸಲ ಮಹಾನಗರ ಪಾಲಿಕೆ ವತಿಯಿಂದ ಮನವಿ ಮಾಡಿದ್ದರೂ, ಸ್ಪಂದಿಸಿದ್ದಿಲ್ಲ. ಈಗ ರೈಲ್ವೆ ಇಂಜಿನಿಯರ್ ಗಳು ಸಹ ಬಂದಿದ್ದು, ಅವರು ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಅವರು ಸಹ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸುವುದಾಗಿ ಹೇಳಿದ್ಧಾರೆ ಎಂದರು.
ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಮಾತನಾಡಿ, ರೈಲ್ವೆ ಅಂಡರ್ ಬ್ರಿಡ್ಜ್ ಸಮಸ್ಯೆ ಬಹಳ ವರ್ಷಗಳಿಂದ ಇದೆ. ಇದಕ್ಕೆ ಮೇಯರ್ ಹೇಳಿದಂತೆ ಸೆನ್ಸಾರ್ ಮೋಟರ್ ಇಟ್ಟು ನೀರನ್ನು ಹೊರ ಹಾಕಲಾಗವುದು. ಈ ವ್ಯವಸ್ಥೆ ಯಶಸ್ವಿಯಾದರೆ, ಇದೇ ಮಾದರಿಯನ್ನು ಎಲ್ಲ ಕಡೆ ಅನುಸರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ್ , ಸಾಮಾಜಿಕ ಕಾರ್ಯಕರ್ತ ಶ್ರೀಕಾಂತ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.