ಬೆಂಗಳೂರು: 6ನೇ ವೇತನ ಜಾರಿಯಾಗುವವರೆಗೂ ಮುಷ್ಕರ ಮುಂದುವರಿಯಲಿದೆ ಎಂದು ಸಾರಿಗೆ ನೌಕರರ ಕೂಟದಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್‍ಗಳಿಂದ ಸರ್ಕಾರಕ್ಕೆ ನಷ್ಟವೇ ಹೊರತು ಲಾಭ ಸಾಧ್ಯವಿಲ್ಲ. ಸರ್ಕಾರ ಅವೈಜ್ಞಾನಿಕ ಪ್ರಯತ್ನ ಮಾಡುತ್ತಿದೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯಲಿದೆ. ಬಂದ್ ಯಶಸ್ಸಿಗೆ ಸಾರಿಗೆ ನೌಕರರ ನೋವುಗಳೇ ಕಾರಣ. ಹಲವು ದಿನಗಳಿಂದ ಅವರಿಗೆ ಸಾಕಷ್ಟು ಸಮಸ್ಯೆಗಳಿವೆ. ವ್ಯಕ್ತಿ ಪ್ರತಿಷ್ಠೆಗಿಂತ ನೌಕರರ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಿದೆ. ಸಂಕಷ್ಟ ಇರುವುದು ದುಡಿಯುವ ಜನಕ್ಕೆ, ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದರು.
6 ವೇತನ ಆಯೋಗದಂತೆ ಸಂಬಳ ಹೆಚ್ಚಾಗಬೇಕು. ಈ ಪ್ರಕಾರವಾದರೆ ಶೇ.36ರಷ್ಟು ವೇತನ ಹೆಚ್ಚಾಗುತ್ತದೆ. ಆದರೆ, ಸರ್ಕಾರ ಶೇ.8ರಷ್ಟು ಹೆಚ್ಚಿಗೆ ಮಾಡುತ್ತೇವೆ ಎಂದು ಹೇಳುತ್ತಿದೆ. ಇದು ಅವೈಜ್ಞಾನಿಕ. ಈ ಕಾಟಾಚಾರದ ಪ್ರಯತ್ನವನ್ನು ನಾವು ಒಪ್ಪುವುದಿಲ್ಲ. ಎಂಟು ಬೇಡಿಕೆಗಳು ಕೂಡ ಸಾರಿಗೆ ನೌಕರರ ಪರವಾಗಿಲ್ಲ. ವೇತನದ ಬಗ್ಗೆ ಮೊದಲು ನಿರ್ಧಾರವಾಗಲಿ. ನಂತರ ಉಳಿದ ಬೇಡಿಕೆಗಳ ಬಗ್ಗೆ ಮಾತನಾಡುತ್ತೇವೆ ಎಂದು ತಿಳಿಸಿದರು.



