ಬೆಂಗಳೂರು: ರಾಜ್ಯದಲ್ಲಿ ಎರಡನೇ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಬೆಂಗಳೂರು ಹಾಗೂ ರಾಜ್ಯಕ್ಕೆ ಕಠಿಣ ಕೋವಿಡ್ 19 ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸಚಿವ ಡಾ. ಕೆ. ಸುಧಾಕರ್ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಹಾಗೂ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿರುವುದು ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಹಲವೆಡೆ ಸಾರ್ವಜನಿಕರು ಸರ್ಕಾರದ ನಿಯಮಗಳಿಗೆ ಸ್ಪಂದಿಸುತ್ತಿಲ್ಲ, ಸಾರ್ವಜನಿಕ ಸಮಾರಂಭಗಳು, ಕಾರ್ಯಕ್ರಮಗಳು ಹಾಗೂ ಚಿತ್ರಮಂದಿರಗಳಲ್ಲಿ ಸರ್ಕಾರದ ನಿಯಮಾವಳಿಗಳಿಗೆ ವಿರುದ್ಧ ನಡೆದುಕೊಳ್ಳಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಹೊಸ ಮಾರ್ಗಸೂಚಿಗೆ ಅಂತಿಮ ಮುದ್ರೆ ಹಾಕಲಿದ್ದು, ಮುಖ್ಯ ಕಾರ್ಯದರ್ಶಿ ಅದನ್ನು ಬಹಿರಂಗಪಡಿಸಲಿದ್ದಾರೆ. ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಶೇ.20ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತರಿಗೆ ಮೀಸಲಿಡುವಂತೆ ಸೂಚಿಸಲು ಸರ್ಕಾರ ತೀರ್ಮಾನಿಸಿದೆ.ಈ ಸಂಬಂಧ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿ ಒಪ್ಪಿಗೆ ಸೂಚಿಸಿದ್ದು, ನಾನು ಕೂಡ ಈ ಆದೇಶಕ್ಕೆ ಸಹಿ ಹಾಕಿದ್ದೇನೆ ಎಂದರು.
ಶೇ.20ರಷ್ಟು ಕೋವಿಡ್ ರೋಗಿಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಮುಂದಿನ ನಿರ್ಭಂಧಗಳಿಗೂ ಸಂಬಂಧಿಸಿದಂತೆ ಈಗಾಗಲೇ ಶಿಕ್ಷಣ ಸಚಿವರೊಂದಿಗೆ ಮಾತನಾಡಿದ್ದು, ಎಲ್ಲಾ ಮಾಹಿತಿಗಳು ಮುಂದಿನ ಮಾರ್ಗಸೂಚಿಯಲ್ಲಿ ಕಾಣಿಸಲಿವೆ. ಇನ್ನು ಕರ್ನಾಟಕದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕುವ ಕಾರ್ಯಕ್ರಮ ಆರಂಭವಾಗಿದೆ ಎಂದು ಮಾಹಿತಿ ನೀಡಿದರು.



