ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿದ್ದು, ಜನರು ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ಪಕ್ಷದ ನಾಯಕರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಡಿ.ಬಸವರಾಜ್, ಉಪ ಚುನಾವಣೆಯಲ್ಲಿ ವಾರ್ಡ್ ನಂಬರ್ 20, 22ರಲ್ಲಿ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ, ಶಾಸಕ ಪರಮೇಶ್ವರ್ ನಾಯ್ಕ್, ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಪ್ರಚಾರ ಮಾಡಿದ್ದಾರೆ. ಎರಡು ವಾರ್ಡ್ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಬಿಜೆಪಿ ಜನಪ್ರತಿನಿಧಿಗಳನ್ನು ಖರೀದಿ ಮಾಡಿ ಅಧಿಕಾರ ಹಿಡಿಯುವ ಕೆಟ್ಟ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದೆ. ರಾಜ್ಯದಲ್ಲಿಯೂ ಬಿಜೆಪಿಗೆ ಜನಾದೇಶ ಸಿಕ್ಕಿಲ್ಲ. ಆದರೂ ಸಹ ಅವರು ಬೇರೆ ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಿ ಯಡಿಯೂರಪ್ಪ ಮುಖ್ಯಂತ್ರಿಯಾಗಿದ್ದಾರೆ. ಅದೇ ರೀತಿ ದಾವಣಗೆರೆ ಮಹಾನಗರ ಪಾಲಿಕೆ ಪಾಲಿಕೆಯ ಮತದಾರರ ಪಟ್ಟಿಗೆ ಹೆಸರುಗಳನ್ನು ಸೇರ್ಪಡೆ ಮಾಡಿ ಅಧಿಕಾರ ಪಡೆದಿದ್ದಾರೆ ಎಂದು ದೂರಿದರು.
ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್ ಮಾತನಾಡಿ, ಅಭ್ಯರ್ಥಿಗಳಾದ ಮೀನಾಕ್ಷಿ ಜಗದೀಶ್ ಹಾಗೂ ಎಸ್. ರವಿಸ್ವಾಮಿ ಅವರನ್ನು ಸ್ಥಳೀಯ ಮುಖಂಡರ ಕೋರಿಕೆಯಂತೆ ನಮ್ಮ ನಾಯಕರು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಎರಡು ಕಡೆ ಕಾಂಗ್ರೆಸ್ ಅಭ್ಯರ್ಥಿಗಳು ಅತ್ಯಂತ ಬಹುಮತದಿಂದ ಆಯ್ಕೆಯಾಗಲಿದ್ದಾರೆ ಎಂದರು.
ಮಹಾನಗರಪಾಲಿಕೆಯ ಹಿರಿಯ ಸದಸ್ಯ ಕೆ. ಚಮನ್‌ಸಾಬ್‌ರವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಪೆಟ್ರೋಲ್, ಡಿಸೇಲ್, ಸಿಲಿಂಡರ್ ಗ್ಯಾಸ್, ಅಡುಗೆ ಎಣ್ಣೆ, ಬೆಳೆಕಾಳುಗಳು ಸೇರಿದಂತೆ ದಿನನಿತ್ಯ ಬೆಲೆ ಏರಿಕೆ ಮಾಡುವ ಮೂಲಕ ಪ್ರತಿಯೊಬ್ಬರ ಜೀವನದಲ್ಲಿ ಬರೇ ಎಳೆದಿದೆ. ಇಂತಹ ಸರ್ಕಾರಕ್ಕೆ ಬುದ್ಧಿ ಕಲಿಸುವುದು ಪ್ರತಿಯೊಬ್ಬರ ನಾಗರೀಕನ ಜವಾಬ್ದಾರಿ ಲೋಕಸಭೆ, ವಿಧಾನ ಸಭೆ, ಮಹಾನಗರ ಪಾಲಿಕೆ ಚುನಾವಣೆ ಆಗಿರಬಹುದು. ಬಿಜೆಪಿಗೆ ತಕ್ಕ ಪಾಠ ಕಲಿಸಬೇಕಿದೆ ಮನವಿ ಮಾಡಿದರು.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಐಯೂಬ್ ಪೈಲ್ವಾನ್ ಮಾತನಾಡಿ, ಉಪಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸುವುದು ಶತಸಿದ್ಧ ವಾರ್ಡ್ 22ರಲ್ಲಿ ಬಿಜೆಪಿಯವರು ಅಲ್ಪಸಂಖ್ಯಾತರ ಮತಗಳನ್ನು ವಿಭಜಿಸಲು ಮುಸ್ಲಿಂ ಅಭ್ಯರ್ಥಿ ನಿಲ್ಲಲು ಪರೋಕ್ಷವಾಗಿ ಕಾರಣವಾಗಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಮತದಾರರು ಪ್ರಜ್ಞಾವಂತರಿದ್ದು ಅವರೆಲ್ಲರೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ ಅಪೂರ್ವ ಗೆಲುವಿಗೆ ಕೊಡುಗೆ ನೀಡಲಿದ್ದಾರೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಹೆಚ್. ಸುಭಾನ್ ಸಾಬ್, ಜಿಲ್ಲಾ ಕಾಂಗ್ರೆಸ್ ಇಂಟಾಕ್ ವಿಭಾಗದ ಅಧ್ಯಕ್ಷ ಕೆ.ಎನ್. ಮಂಜುನಾಥ್, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಉಪಾಧ್ಯಕ್ಷ ಹೆಚ್. ಇಮ್ತಿಯಾಜ್ ಬೇಗ್, ಕಾಂಗ್ರೆಸ್ ಮುಖಂಡರಾದ ಡಿ. ಶಿವಕುಮಾರ್, ಅಮರಪ್ಪನ ತೋಟದ ದಾದಾಪೀರ್ ಮತ್ತು ಶೇಖರಪ್ಪನಗರದ ದಾದಾಪೀರ್ ಉಪಸ್ಥಿತರಿದ್ದರು.