ದಾವಣಗೆರೆ: ನಗರದ ಸ್ವಚ್ಚತೆ ಎಂಬುದು ಇದೀಗ ದೊಡ್ಡ ಸವಾಲಾಗಿದೆ. ನಾವೀಗ 21 ನೇ ಶತಮಾನದಲ್ಲಿದ್ದು ನಮ್ಮ ವರ್ತನೆಗಳು, ಭಾವನೆಗಳು ಬದಲಾಗುತ್ತಿಲ್ಲ. ನಗರ ಸ್ವಚ್ಚವಾಗಬೇಕಾದ್ರೆ ನಾಗರೀಕರ ಪಾಲ್ಗೊಳ್ಳುವಿಕೆ ತುಂಬಾ ಮುಖ್ಯ. ನಗರದ ದುಸ್ಥಿತಿಗೆ ಜನರೇ ನೇರ ಕಾರಣರಾಗುತ್ತಾರೆ. ನಿಮ್ಮ ಸಹಭಾಗಿತ್ವ ಇದ್ದರೆ ಮಾತ್ರ ನಗರದ ಶುಚಿತ್ವ ಸಾಧ್ಯ ಎಂದು ಮಹಾ ನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್ ಹೇಳಿದರು.
ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ 26 ಹೊಸ ಕಸ ವಿಲೇವಾರಿ ವಾಹನಗಳನ್ನು ಖರೀದಿ ಮಾಡಿದ್ದು, ಇದಕ್ಕೂ ಮೊದಲು 25 ವಾಹನಗಳು ಇದ್ದವು. ಮನೆಮನೆಗಳಿಂದ ಕಸ ತೆಗೆದುಕೊಂಡು ಹೋಗಲು ಬರುವ ಸಿಬ್ಬಂದಿಗೆ ಸಾರ್ವಜನಿಕರು ಯಾವುದೇ ಶುಲ್ಕ ಕೊಡುವ ಅವಶ್ಯಕತೆ ಇಲ್ಲ. ಕಸ ಹಾಕಲು ಆಗದ ಉದ್ಯೋಗಸ್ಥರ ಮನೆಯಲ್ಲಿ ಸಿಬ್ಬಂದಿಗಳೇ ಸ್ವತಃ ಸಂಗ್ರಹಿಸಿಕೊಂಡು ಬರುವ ಸಿಬ್ಬಂದಿಗೆ ಶುಲ್ಕ ನೀಡಬಹುದು. ಕಸ ವಿಲೇವಾರಿ ಮಾಡುವುದು ಮಹಾನಗರಪಾಲಿಕೆಯ ಉಚಿತ ಸೇವೆಯಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಎಲ್ಲರೂ ಕಸವನ್ನು ಕಸದ ಗಾಡಿಗೆ ಹಾಕಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ 2 ಹೊಸ ಕಾಂಪ್ಯಾಕ್ಟ್ ವಾಹನಗಳನ್ನ ಖರೀದಿಸಿದ್ದು, ಮುಂದೆ ಇನ್ನೆರಡು ವಾಹನಗಳನ್ನು ಖರೀದಿಸಲಾಗುತ್ತದೆ. ಜನಸಂಖ್ಯೆಗನುಗುಣವಾಗಿ ಟಾಟಾ ಎಸಿಗಳನ್ನು ಖರೀದಿ ಮಾಡುತ್ತೇವೆ. ಇನ್ನು ಕೆಲವೇ ದಿನಗಳಲ್ಲಿ ರಸ್ತೆಗಳನ್ನು ಶುಚಿ ಮಾಡಲು ಮೆಕ್ಯಾನೈಸ್ಡ್ ಸ್ವೀಪಿಂಗ್ ಮಷಿನ್ ಖರೀದಿಗೆ ಮುಂದಾಗಿದ್ದೇವೆ. ಯಾಕೆಂದರೆ ನಮ್ಮಲ್ಲಿ ಪೌರಕಾರ್ಮಿಕರ ಸಂಖ್ಯೆ ಕಡಿಮೆಯಿದ್ದು, ತಾಂತ್ರಿಕ ಯುಗಕ್ಕೆ ತಕ್ಕಂತೆ ಈ ಮಷಿನ್‍ಗಳನ್ನು ಬಳಸಲು ಮುಂದಾಗುತ್ತಿದ್ದೇವೆ ಎಂದರು.
ಬೇಸಿಗೆ ಸಂದರ್ಭದಲ್ಲಿ ನೀರಿನ ಅಭಾವವಿರುವುದರಿಂದ ನೀರನ್ನು ಮಿತವಾಗಿ ಬಳಸೋಣ. ಆದಷ್ಟು ನೀರನ್ನು ಮರುಬಳಕೆ ಮಾಡಬೇಕು. ನೀರು ಕೇಳುವುದು ನಮ್ಮ ಹಕ್ಕು. ಬರುವ ನೀರನ್ನು ಮಿತವಾಗಿ ಬಳಸುವುದು ನಮ್ಮ ಜವಬ್ದಾರಿ. ಹಾಗಾಗಿ ಹಕ್ಕು ಮತ್ತು ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸೋಣ.
ಈ ಮೊದಲು ಕೊರೊನಾ ಸೋಂಕು ಉಲ್ಬಣವಾದ ನಂತರ ಎಚ್ಚೆತ್ತುಕೊಂಡಿದ್ದೆವು. ಈಗ ಸಮಸ್ಯೆ ಬರುವುದ್ದಕ್ಕೂ ಮೊದಲೇ ಜಾಗೃತರಾಗಬೇಕು. ಸರ್ಕಾರದ ಕೋವಿಡ್ ನಿಯಮಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸೋಣ. ಮುಂದಿನ ದಿನಗಳಲ್ಲಿ ಸಾರ್ವಜನಿಕರನ್ನು ಒಗ್ಗೂಡಿಸಿ ಸ್ವಚ್ಚ ದಾವಣಗೆರೆ ಅಭಿಯಾನ ಆರಂಭಮಾಡುತ್ತಿದ್ದು, ಎಲ್ಲರ ಸಲಹೆ ಸೂಚನೆಗಳು ಇರಲಿ ಎಂದು ಕೋರಿದರು.
.