Connect with us

Dvgsuddi Kannada | online news portal | Kannada news online

ದಾವಣಗೆರೆ: ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಬ್ರೇಕ್;  ಮಾಸ್ಕ್ ಧರಿಸದಿದ್ರೆ ದಂಡ: ಜಿಲ್ಲಾಧಿಕಾರಿ

ದಾವಣಗೆರೆ

ದಾವಣಗೆರೆ: ಸಾರ್ವಜನಿಕವಾಗಿ ಹಬ್ಬ ಆಚರಣೆಗೆ ಬ್ರೇಕ್;  ಮಾಸ್ಕ್ ಧರಿಸದಿದ್ರೆ ದಂಡ: ಜಿಲ್ಲಾಧಿಕಾರಿ

ದಾವಣಗೆರೆ: ಕೋವಿಡ್-19 ಸೋಂಕಿನ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕವಾಗಿ ಹಬ್ಬಹರಿದಿನ ಆಚರಣೆಗೆ  ನಿಷೇಧಿಸಲಾಗಿದ್ದು,  ಜನರು ತಮ್ಮ ತಮ್ಮ ಮನೆಗಳಲ್ಲೇ ಸರಳವಾಗಿ ಹಬ್ಬ ಆಚರಣೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಗುರುವಾರ ಜಿಲ್ಲಾ ಪೊಲೀಸ್ ಸಭಾಂಗಣದಲ್ಲಿ ಹೋಳಿ, ಷಬ್-ಎ ಬಾರತ್ ಮತ್ತು ಮಹಾನಗರ ಪಾಲಿಕೆ ಹಾಗೂ ಗ್ರಾಮ ಪಂಚಾಯಿತಿ ಚುನಾವಣೆ ಪ್ರಯುಕ್ತ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾ.28 ಕ್ಕೆ ಹಿಂದುಗಳು ಕಾಮನನ್ನು ಸುಟ್ಟರೆ, ಮುಸ್ಲಿಂ ಬಾಂಧವರು ಖಬ್ರಸ್ಥಾನಕ್ಕೆ ತೆರಳಿ ಪ್ರಾರ್ಥನೆ ಮಾಡಿ ಜಾಗರಣೆ ಮಾಡುತ್ತಾರೆ. ಮಾ.29 ರಂದು ಮಹಾನಗರಪಾಲಿಕೆಯ ವಾರ್ಡ್ ನಂಬರ್ 20 ಮತ್ತು 22 ರಲ್ಲಿ ಉಪ ಚುನಾವಣೆ ಇದೆ ಹಾಗೂ ದಾವಣಗೆರೆ ತಾಲ್ಲೂಕಿನಲ್ಲಿ 3 ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 01 ಗ್ರಾಮ ಪಂಚಾಯಿತಿ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಈ ಎಲ್ಲಾ ಚಟುವಟಿಕೆಗಳನ್ನು ಶಾಂತಿ ಮತ್ತು ಸೌಹಾರ್ದತೆಯಿಂದ ನಡೆಸಿಕೊಂಡು ಹೋಗಬೇಕಿದೆ ಎಂದರು.

ನಮ್ಮ ಆಚರಣೆ ನಮಗೆ ಸುಖ, ಶಾಂತಿ, ಆರೋಗ್ಯ ತಂದುಕೊಡಬೇಕೇ ವಿನಃ ಮಾರಕವಾಗಬಾರದು. 2020 ರ ಇದೇ ದಿನ ಜಿಲ್ಲೆಯಲ್ಲಿ ಕೇವಲ 3 ಕೊರೊನಾ ಪಾಸಿಟಿವ್ ಕೇಸ್ ಇತ್ತು. ಎಲ್ಲಾ ಜನರು ಎಚ್ಚೆತ್ತುಕೊಂಡಿದ್ದರು. ಆದರೆ ಇಂದು 63 ಸಕ್ರಿಯ ಪ್ರಕರಣಗಳಿದ್ದು ಕೊರೊನಾ ಸೋಂಕಿನ ಕುರಿತು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈಗಾಗಲೇ ಜಿಲ್ಲಾಡಳಿತ ನಗರದಾದ್ಯಂತ ಸಂಚಾರ ಮಾಡಿ ಮಾಸ್ಕ್ ಹಾಕದಿದ್ದರೆ ದಂಡ ಹಾಕಲಾಗುವುದು ಎಂದ ಎಚ್ಚರಿಕೆ ನೀಡಲಾಗಿತ್ತು. ಈ ಎಚ್ಚರಿಕೆ ನೀಡಿ ಇಂದಿಗೆ ನಾಲ್ಕು ದಿನಗಳು ಸಂದಿದೆ. ಆದರೂ ಸಹ ಜನರು ಎಚ್ಚೆತ್ತುಕೊಂಡಿಲ್ಲ. ಮುಂದಿನ ದಿನಗಳಲ್ಲಿ ಮಾಸ್ಕ್ ಹಾಗೂ ನಿಯಮ ಪಾಲನೆ ಮಾಡದಿರುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಹಾಗೂ ದಂಡವನ್ನು ವಿಧಿಸಲಾಗುವುದು ಎಂದು ಕಟ್ಟೆಚ್ಚರ ನೀಡಿದರು.

ಧಾರ್ಮಿಕ ಪೂಜೆ ಹಾಗೂ ಸಾಂಪ್ರಾದಾಯಿಕ ಆಚರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಮದುವೆ, ಜಾತ್ರೆ, ಸಭೆ-ಸಮಾರಂಭಗಳಲ್ಲಿ ನಿಗದಿಪಡಿಸಿದ ಮಿತಿಗಿಂತ ಹೆಚ್ಚು ಜನರು ಸೇರಬಾರದು. ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಇಲ್ಲದಿದ್ದರೆ ಮಾಲೀಕರು, ಆಯೋಜಕರಿಗೆ ದಂಡ ವಿಧಿಸಲಾಗುವುದು.

ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಮಾರ್ಚ್ 28 ಮತ್ತು 29 ರಂದು ಕಾಮನನ್ನು ಸುಡುವುದು, ಹೋಳಿ ಹಬ್ಬ, ಷಬ್-ಎ-ಬಾರತ್ ಹಬ್ಬಗಳು ಹಾಗೂ ಪಾಲಿಕೆ ಮತ್ತು ಗ್ರಾ.ಪಂ ಚುನಾವಣೆಗಳು ಸೇರಿದಂತೆ ಈ ತಿಂಗಳಲ್ಲೇ ಹಲವು ಜಾತ್ರೆ-ಮಹೋತ್ಸವಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ರಾಜ್ಯ ಹಾಗೂ ಕೇಂದ್ರ ಸರ್ಕಾರ ಹೊರಡಿಸಿರುವ ಕೋವಿಡ್ ಮಾರ್ಗಸೂಚಿಗಳನ್ವಯ ಹಬ್ಬ-ಹರಿದಿನಗಳನ್ನು ಆಚರಿಸಬೇಕು ಎಂದರು.

ಮುಂಬೈಯೊಂದರಲ್ಲೆ ಒಂದೇ ದಿನಕ್ಕೆ 5000 ಪ್ರಕರಣಗಳು ದಾಖಲಾಗಿದ್ದು ಸುಮಾರು ಸಾವುಗಳಾಗಿವೆ. ಅಲ್ಲದೇ ಕೋವಿಡ್ ರೂಪಾಂತರಿ ವೈರಾಣು ಪತ್ತೆಯಾಗಿದ್ದು ಭಾರತದಲ್ಲಿ ಬುಧವಾರ ಡಬಲ್ ಮ್ಯುಟೇಟ್ ವೇರಿಯಂಟ್ ಖಚಿತವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಕಾರಣದಿಂದ ಹಬ್ಬ ಹರಿದಿನಗಳನ್ನು ಸರ್ಕಾರದ ನಿಯಮಗಳನ್ವಯ ಕಟ್ಟುನಿಟ್ಟಾಗಿ ಆಚರಣೆ ಮಾಡಬೇಕು ಎಂದು ತಿಳಿಸಿದರು.

ಮಾಸ್ಕ್ ಧರಿಸದಿದ್ದರೆ ರೂ.250 ದಂಡ : ನಗರಸಭೆ ವ್ಯಾಪ್ತಿಗಳಲ್ಲಿ ಮಾಸ್ಕ್ ಧರಿಸದಿದ್ದರೆ 250 ರೂ. ದಂಡ ಹಾಗೂ ಇತರೆ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ ರೂ. 100 ದಂಡ ವಿಧಿಸಬೇಕು. ನಗರಸಭೆ ವ್ಯಾಪ್ತಿಯಲ್ಲಿ ಹೆಡ್ ಕಾನ್ಸ್‍ಟೇಬಲ್‍ಗಿಂತ ಮೇಲಿನ ರ್ಯಾಂಕ್‍ನ ಪೊಲೀಸರು, ಆರೋಗ್ಯಾಧಿಕಾರಿಗಳು ದಂಡ ವಿಧಿಸಬಹುದು. ಇನ್ನೂ ಗ್ರಾಮ ಪಂಚಾಯಿತ್ತಿಗಳ ವ್ಯಾಪ್ತಿಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗಳು ದಂಡ ಸಂಗ್ರಹಿಸಬೇಕು ಎಂದು ತಿಳಿಸಿದರು.

ಜನ ಸೇರಲು ಮಿತಿ : ಮದುವೆ ಸಮಾರಂಭಕ್ಕೆ ತೆರೆದ ಪ್ರದೇಶದಲ್ಲಿ 500 ಜನ, ಒಳಾಂಗಣದಲ್ಲಿ 200 ಜನಕ್ಕಿಂತ ಹೆಚ್ಚು ಮಂದಿ ಸೇರಬಾರದು. ಹುಟ್ಟಿದ ಹಬ್ಬದ ಆಚರಣೆಗೆ ತೆರೆದ ಸ್ಥಳದಲ್ಲಿ 100 ಜನ, ಒಳಾಂಗಣದಲ್ಲಿ 50 ಜನ, ಅಂತ್ಯಕ್ರಿಯೆಗೆ 50, ಇತರೆ ಕಾರ್ಯಕ್ರಮಗಳಿಗೆ 100 ಜನ, ಧಾರ್ಮಿಕ ಆಚರಣೆಗೆ ತೆರೆದ ಪ್ರದೇಶದಲ್ಲಿ 500 ಜನರ ಮಿತಿ ಸೂಚಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ಹಾಗೂ ತಮ್ಮ ಆವರಣದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲಿಸುವುದನ್ನು ಆಯಾ ಮಾಲೀಕರನ್ನು ಹೊಣೆಯಾಗಿಸಿ ಕಾಯ್ದೆಯನ್ವಯ ದಂಡ ವಿಧಿಸಲಾಗುವುದು

10 ಸಾವಿರ ದಂಡ : ನಿಯಮ ಉಲ್ಲಂಘನೆಗೆ ಎ.ಸಿ. ಪಾರ್ಟಿ ಹಾಲ್, ವಾಣಿಜ್ಯ ಮಳಿಗೆಗಳಿಗೆ 5 ಸಾವಿರ ರೂ., ಬ್ರಾಂಡೆಡ್ ಶಾಪ್, ಶಾಪಿಂಗ್ ಮಾಲ್‍ಗಳಿಗೆ 10 ಸಾವಿರ ರೂ., ಸ್ಟಾರ್ ಹೋಟೆಲ್, ಮದುವೆ ಸಮಾರಂಭಗಳಲ್ಲಿ ನಿಯಮ ಉಲ್ಲಂಘಿಸಿದರೆ ಮಾಲೀಕರಿಗೆ 10 ಸಾವಿರ ರೂ., ಹಾಗೂ ಸಾರ್ವಜನಿಕ ಸಮಾರಂಭ, ಜಾತ್ರೆ, ಮಹೋತ್ಸವ, ಹಬ್ಬ ಹರಿದಿನಗಳಲ್ಲಿ ನಿಯಮ ಉಲ್ಲಂಘನೆಯಾದರೆ ಆಯೋಜಕರಿಗೆ ರೂ.10 ಸಾವಿರ, ದಂಡ ವಿಧಿಸಲು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ.

ಹಿಂದು ಪರ ಸಂಘಟನೆ ಮುಖಂಡರಾದ ಕೆ.ಬಿ.ಶಂಕರ್ ನಾರಾಯಣ್ , ಸತೀಶ್ ಪೂಜಾರ್, ಸೋಮ್ಲಾಪುರ ಹನುಮಂತಪ್ಪ ಹಾಗೂ ಮುಸ್ಲಿಂ ಮುಖಂಡರಾದ ಅಮಾನುಲ್ಲಾ ಖಾನ್, ಸಾಧಿಕ್ ಪೈಲ್ವಾನ್, ಸರ್ದಾರ್, ಸಿರಾಜ್ ಸೇರಿದಂತೆ ಬಿಜೆಪಿ ಮುಖಂಡ ವೈ.ಮಲ್ಲೇಶ್ ಹಾಗೂ ಮಾಜಿ ಮಹಾನಗರಪಾಲಿಕೆ ಸದಸ್ಯ ಹಾಲೇಶ್ ರವರು ಸೌಹಾರ್ಧಯುತ ಹಬ್ಬಗಳ ಆಚರಣೆ ಕುರಿತು ತಮ್ಮ ಸಲಹೆಗಳನ್ನು ಹಾಗೂ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಮಹಾ ನಗರಪಾಲಿಕೆ ಮೇಯರ್ ಎಸ್.ಟಿ.ವೀರೇಶ್,  ಡಿಹೆಚ್‍ಒ ಡಾ.ನಾಗರಾಜ್, ಅಬಕಾರಿ ಉಪಾಯುಕ್ತ ಪಿ.ಶಿವಪ್ರಸಾದ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್, ಜಿಲ್ಲಾ ಸರ್ಜನ್ ಡಾ.ಜಯಪ್ರಕಾಶ್, ನಗರ ಡಿವೈಎಸ್‍ಪಿ ನಾಗೇಶ್ ಐತಾಳ್ ಸೇರಿದಂತೆ ನಗರಸಭೆ ಉಪಾಯುಕ್ತರು, ಪರಿಸರ ಇಲಾಖೆ ಅಧಿಕಾರಿ, ಅಬಕಾರಿ ಇಲಾಖೆಯ ಅಧಿಕಾರಿ, ಅಗ್ನಿ ಶಾಮಕ ದಳ, ಬೆಸ್ಕಾಂ, ಅಧಿಕಾರಿಗಳು ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top