ದಾವಣಗೆರೆ: ಜಿಲ್ಲೆಯಲ್ಲಿ ಈವರೆಗೆ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವ 4,912 ಅಕ್ರಮ ಬಿಪಿಎಲ್ ಕಾರ್ಡ್ ದಾರರನ್ನು ಪತ್ತೆ ಮಾಡಿ ರದ್ದುಪಡಿಸಲಾಗಿದೆ ಎಂದು ಆಹಾರ ಇಲಾಖೆ ಸಹಾಯಕ ನಿರ್ದೇಶಕ ಸೈಯದ್ ಖಲೀಮುಲ್ಲ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಕೆಡಿಪಿ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರನ್ನು ಪತ್ತೆಹಚ್ಚಿ ಕ್ರಮ ಜರುಗಿಸಲು ಇಲಾಖೆ ಆಂದೋಲನ ಕೈಗೊಂಡಿದೆ. ಈವರೆಗೆ ಅಕ್ರಮವಾಗಿ ಬಿಪಿಎಲ್ ಕಾರ್ಡ್ ಹೊಂದಿದ್ದ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರನ್ನು ಪತ್ತೆಹಚ್ಚಿ 4912 ಕಾರ್ಡ್ ರದ್ದುಪಡಿಸಿದೆ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಪ್ರಸಕ್ತ ವರ್ಷ ನೊಂದಣಿಗೊಂಡ ನಾಲ್ಕುಚಕ್ರ ವಾಹನಗಳ ಮಾಲೀಕರ ಹೆಸರು, ಆಧಾರ್ ಸಂಖ್ಯೆಯ ವಿವರ ಪಡೆದು, ಅಂತಹವರು ಬಿಪಿಎಲ್ ಕಾರ್ಡ್ ಹೊಂದಿದ್ದಲ್ಲಿ ಪತ್ತೆ ಹಚ್ಚಿ, ಬಿಪಿಎಲ್ ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಆಹಾರ ಇಲಾಖೆ ಪ್ರಾರಂಭಿಸಿದೆ. ಪಡಿತರ ವಿತರಣೆಯಲ್ಲಿ ಲೋಪವೆಸಗಿದ ಹಿನ್ನೆಲೆಯಲ್ಲಿ 8 ನ್ಯಾಯಬೆಲೆ ಅಂಗಡಿ ಪರವಾನಿಗೆ ಅಮಾನತುಗೊಳಿಸಿದ್ದು, 3 ನ್ಯಾಯಬೆಲೆ ಅಂಗಡಿಗಳನ್ನು ರದ್ದುಪಡಿಸಲಾಗಿದೆ.
ನ್ಯಾಯಬೆಲೆ ಅಂಗಡಿಕಾರರೊಂದಿಗೆ ಸಭೆ ನಡೆಸಿ, ತಿಂಗಳ ಎಲ್ಲ ದಿನಗಳಲ್ಲೂ ಅಂಗಡಿಗಳನ್ನು ತೆರೆದು, ಪಡಿತರ ಸಮರ್ಪಕ ವಿತರಣೆಗೆ ಸೂಚನೆ ನೀಡಲಾಗಿದೆ ಎಂದರು. ಜಿ.ಪಂ. ಅಧ್ಯಕ್ಷರು ಪ್ರತಿಕ್ರಿಯಿಸಿ, ಬಿಪಿಎಲ್ ಕಾರ್ಡ್‍ದಾರರು ಸತತ ಎರಡು ತಿಂಗಳು ಪಡಿತರ ಪಡೆಯದಿದ್ದರೆ ಅಂತಹವರಿಗೆ ನ್ಯಾಯಬೆಲೆ ಅಂಗಡಿಯವರು ನಿಮಗೆ ಪಡಿತರ ರದ್ದಾಗಿದೆ ಎಂದು ತಿಳಿಸಿ ವಾಪಸ್ ಕಳುಹಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ ಎಂದರು. ಇದಕ್ಕೆ ಉತ್ತರಿಸಿದ ಖಲೀಮುಲ್ಲ ಅವರು, ಬಿಪಿಎಲ್ ಕಾರ್ಡ್‍ದಾರರು ಸತತವಾಗಿ 6 ತಿಂಗಳು ಪಡಿತರ ಪಡೆಯದಿದ್ದಲ್ಲಿ ಮಾತ್ರ, ಅಂತಹವರಿಗೆ ಮುಂದಿನ ತಿಂಗಳ ಪಡಿತರ ಮಂಜೂರಾಗುವುದಿಲ್ಲ ಎಂದರು.



