ನವದೆಹಲಿ: ಪೆಟ್ರೋಲ್, ಡೀಸೆಲ್ ಹಾಗೂ ಇಂಧನ ಬೆಲೆಗಳು ದಿನದಿಂದ ದಿನಕ್ಕೆ ದಾಖಲೆಯ ಪ್ರಮಾಣದಲ್ಲಿ ಏರಿಕೆ ಆಗುತ್ತಿವೆ. ಬೆಲೆ ನಿಯಂತ್ರಣಕ್ಕೆ ಪೆಟ್ರೋಲ್, ಡೀಸೆಲ್, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ, ವಿಮಾನ ಇಂಧನಗಳನ್ನು ಜಿ ಎಸ್ ಟಿ ತಬೇಕು ಎಂದು ಕೆಲ ತಜ್ಞರು ಸಲಹೆ ನೀಡಿದ್ದರು. ಆದರೆ, ಈ ಬಗ್ಗೆ, ಲೋಕಸಭೆಯಲ್ಲಿ ಲಿಖಿತ ರೂಪದಲ್ಲಿ ಉತ್ತರಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಜಿಎಸ್ ಟಿ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾಪನೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ.
2017, ಜುಲೈ 1 ರಂದು ಜಿ ಎಸ್ ಟಿಯನ್ನು ಜಾರಿಗೊಳಿಸಿದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆದಾಯಗಳು ಪೆಟ್ರೋಲಿಯಂ ಕ್ಷೇತ್ರವನ್ನು ಅವಲಂಭಿಸಿರುವುದನ್ನು ಆಧರಿಸಿ ಪೆಟ್ರೋಲ್, ಡೀಸೆಲ್, ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲ, ವಿಮಾನ ಇಂಧನಗಳನ್ನು ಜಿ ಎಸ್ ಟಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಇದು ಇಂಧನಗಳ ಮೇಲೆ ಕೇಂದ್ರ ಸರ್ಕಾರವು ಅಬಕಾರಿ ಶುಲ್ಕವನ್ನು ಹಾಗೂ ರಾಜ್ಯ ಸರ್ಕಾರವು ವ್ಯಾಟ್ ಹಾಕುವುದನ್ನು ಮುಂದುವರಿಸಲು ಅವಕಾಶವನ್ನು ಒದಗಿಸಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿರುವ ಬೆನ್ನಲ್ಲೇ ಜಿ ಎಸ್ ಟಿ ವ್ಯಾಪ್ತಿಗೆ ಒಳಪಡಿಸಬೇಕೆಂಬ ಮಾತುಗಳು ಕೇಳಿಬಂದಿತ್ತು.