ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮ ಯಶಸ್ವಿಯಾಗಿದ್ದು, ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ಹೇಳಿದರು.
ಒಂದು ವಾರದ ಹಿಂದೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕರೆ ಮಾಡಿ ನಮ್ಮ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪ್ರಧಾನಮಂತ್ರಿ ನಿಮಗೆ ಕರೆ ಮಾಡಲಿದ್ದಾರೆ ಎಂದಿದ್ದರು. ಅವರು ಹೇಳಿದ ಎರಡು ದಿನಗಳ ಬಳಿಕ ಸ್ವತಃ ಪ್ರಧಾನಿ ಅವರೇ ಕರೆ ಮಾಡಿ ಒಳ್ಳೆಯ ಯೋಜನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮನೆ ಬಾಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮಕ್ಕೆ 9 ಲಕ್ಷ ವೆಚ್ಚವಾಗಿದೆ. ಆಸ್ತಿ ತೆರಿಗೆ ಮತ್ತು ನೀರಿನ ತೆರಿಗೆ ರೂಪದಲ್ಲಿ 1.45 ಕೋಟಿ ಸಂಗ್ರಹವಾಗಿದೆ. 344 ಪರವಾನಗಿ ನೀಡಲಾಗಿದೆ. ಇದರಿಂದ 4.59 ಲಕ್ಷ ಸಂಗ್ರಹವಾಗಿದೆ. 490 ಜನನ-ಮರಣ ಪ್ರಮಾಣಪತ್ರ ವಿತರಣೆ ಮಾಡಲಾಗಿದೆ. 21 ಕಟ್ಟಡ ಪರವಾನಗಿ ನೀಡಲಾಗಿದೆ. 344 ಟ್ರೇಡ್ ಲೈಸನ್ಸ್ ನೀಡಲಾಗಿದೆ. ಎಂಜಿನಿಯರಿಂಗ್ ಶಾಖೆಗೆ 206, ಆಶ್ರಯ ಶಾಖೆಗೆ 95, ಆರೋಗ್ಯ ಶಾಖೆಗೆ 38, ವಿದ್ಯುತ್ ಶಾಖೆಗೆ 286, ಕಂದಾಯ ಶಾಖೆಗೆ 17 ದೂರು ಬಂದಿದೆ. ಶೇ 60ರಷ್ಟು ಪ್ರಕರಣ ಬಗೆಹರಿಸಲಾಗಿದೆ ಎಂದರು.
41 ವಾರ್ಡ್ಗಳಲ್ಲಿ ಈ ಕಾರ್ಯಕ್ರಮ ಮುಗಿದಿದೆ. 17 ಮತ್ತು 24ನೇ ವಾರ್ಡ್ನ ಕಾರ್ಯಕ್ರಮ ಫೆ.20ರಂದು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. 32ನೇ ವಾರ್ಡ್ನ ಉಮಾ ಪ್ರಕಾಶ್ ಮತ್ತು 35ನೇ ವಾರ್ಡ್ ಸದಸ್ಯೆ ಸವಿತಾ ಗಣೇಶ್ ಅವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು.



