ವಿಜಯನಗರ: ಪ್ರತಿ ವರ್ಷದಂತೆ ಈ ವರ್ಷವೂ ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದಲ್ಲಿ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಜಾತ್ರೆ, ಕಾರ್ಣಿಕೋತ್ಸವ ಫೆ. 19 ರಿಂದ ಮಾ.02ರವರೆಗೆ ನಡೆಯಲಿದೆ. ಈ ಬಾರಿ ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕ ಮತ್ತು ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಭಕ್ತಾಧಿಗಳು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಲಾಗಿದೆ.
ಸಾರ್ವಜನಿಕ ಮತ್ತು ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ಕೋವಿಡ್-19(ಕೊರೋನಾ ವೈರಾಣು-2019) ಹರಡದಂತೆ ತಡೆಯುವ ಕುರಿತು ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜಿಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ದಂಡ ಪ್ರಕ್ರಿಯಾ ಸಂಹಿತೆ-1973 ಕಲಂ 144 ಅಡಿ ದಿನಾಂಕ 19-02-2021ರಿಂದ ದಿನಾಂಕ 02-03-2021ರವರೆಗೆ ಮೈಲಾರ ಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ಕಾರ್ಣಿಕೋತ್ಸವಗಳಿಗೆ ಭಕ್ತಾಧಿಗಳು, ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿಷೇಧಿಸಿದ್ದಾರೆ.
ಈ ಹಿನ್ನಲೆಯಲ್ಲಿ ಭಕ್ತಾಧಿಗಳಿಗೆ ನೀರು, ಬೆಳಕು, ಶೌಚಾಲಯ ಇನ್ನಿತರೆ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ಮೈಲಾರ ಗ್ರಾಮ ಹಾಗೂ ಸುತ್ತ-ಮುತ್ತಲಿನ ಹೊಲಗಳಲ್ಲಿ ವಸತಿ ಮಾಡಲು ಅವಕಾಶವಿರುವುದಿಲ್ಲ. ಎತ್ತಿನ ಬಂಡಿ, ಬೈಕ್, ಟ್ರ್ಯಾಕ್ಟರ್, ಕಾರು, ಬಸ್ಸು ಹಾಗೂ ಇತರೆ ಗೂಡ್ಸ್ ವಾಹನಗಳು ಮತ್ತು ಸಾರ್ವಜನಿಕರು ಭಕ್ತಾಧಿಗಳಿಗೆ ದಿನಾಂಕ 19-02-2021ರಿಂದ 02-03-2021ರವರೆಗೆ ಮೈಲಾರ ಕ್ಷೇತ್ರಕ್ಕೆ ಪ್ರವೇಶವಿರುದಿಲ್ಲ. ಭಕ್ತಾಧಿಗಳು, ಸಾರ್ವಜನಿಕರು ಸಹಕರಿಸಬೇಕೆಂದು ವಿನಂತಿಸಿದ್ದಾರೆ.



