Connect with us

Dvgsuddi Kannada | online news portal | Kannada news online

ಫೆ. 19 ರಿಂದ 27 ವರೆಗೆ ಆನ್ ಲೈನ್ ನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವನ್ನು ಈ ಲಿಂಕ್ ಮೂಲಕ ವೀಕ್ಷಿಸಿ..!

ಪ್ರಮುಖ ಸುದ್ದಿ

ಫೆ. 19 ರಿಂದ 27 ವರೆಗೆ ಆನ್ ಲೈನ್ ನಲ್ಲಿ ನಡೆಯಲಿರುವ ತರಳಬಾಳು ಹುಣ್ಣಿಮೆ ಮಹೋತ್ಸವನ್ನು ಈ ಲಿಂಕ್ ಮೂಲಕ ವೀಕ್ಷಿಸಿ..!

ಸಿರಿಗೆರೆ: ಲಕ್ಷಾಂತರ ಭಕ್ತಾದಿಗಳ  ಜಮಾವಣೆಯಲ್ಲಿ ವೈಭವದಿಂದ ನಾಡಿನ ಒಳ ಒರಗೆ  ನಡೆಯುವ ಭಾವೈಕ್ಯತಾ ಪರಿಷತ್, ಚಲಿಸುವ ವಿಶ್ವ ವಿದ್ಯಾಲಯ,ಜ್ಞಾನ ದಾಸೋಹ ಕಾರ್ಯಕ್ರಮ  ಎಂದೇ ಜನಮನದಲ್ಲಿ ಹೆಸರಾಗಿ ನಾಡಿನ ಎಲ್ಲಾ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸಮಾರಂಭವಾಗಿ ಸರ್ವಜನಾಧರಣೆಯ ಸಮಾರಂಭವಾಗಿ ಈ ವರ್ಷ (2021) ಬಳ್ಳಾರಿ ಜಿಲ್ಲೆಯ (ಈಗಿನ ವಿಜಯನಗರ)  ಕೊಟ್ಟರೂ ಪಟ್ಟಣದಲ್ಲಿ ನಡೆಯಬೇಕಿದ್ದ  ತರಳಬಾಳು ಹುಣ್ಣಿಮೆ ಮಹೋತ್ಸವವನ್ನು  ಕೊರೊನಾ ಹಿನ್ನೆಲೆಯಲ್ಲಿ  ಮುಂದೂಡಲಾಗಿದೆ. ಈ ವರ್ಷ ಅಂತರ್ಜಾಲದ ಮುಖಾಂತರ   ಆಚರಿಸುವುದಾಗಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪೀಠಾಧಿಪತಿಗಳಾದ  ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ತೀರ್ಮಾನಿಸಿದ್ದಾರೆ. ಈ  ಕಾರ್ಯಕ್ರಮಗಳ ನೇರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ,  ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ವೆಬ್ ಸೈಟ್ ನಲ್ಲಿ http://taralabaluhunnime.in/.

ಶ್ರೀ ತರಳಬಾಳು ಜಗದ್ಗುರು ಬೃಹನ್ನಠವು ಕಳೆದ 70 ವರ್ಷಗಳಿಂದ ನಾಡಿನ ಒಳ- ಹೊರಗೆ ನಡೆಸಿಕೊಂಡು ಬಂದಿರುವ ವಾರ್ಷಿಕ ಸಮಾರಂಭ “ತರಳಬಾಳು ಹುಣ್ಣಿಮೆ ಮಹೋತ್ಸವ” ಒಂದು ನಾಡಹಬ್ಬವಾಗಿ ಸರ್ವಜನಾದರಣೆಯನ್ನು ಗಳಿಸಿದೆ. ಸಂಕುಚಿತ ಬುದ್ಧಿಯ ಮೂಲಭೂತವಾದಿಗಳ ಕೋಲಾಹಲದಿಂದಾಗಿ ವಿವಿಧ ಧರ್ಮಗಳ ಮಧ್ಯೆ ಸಂಶಯದ ಅಡ್ಡಗೋಡೆಗಳು ನಿರ್ಮಾಣವಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಜಾತಿ- ಮತ, ಪ್ರಾಂತ್ಯ- ಪ್ರದೇಶಗಳ ಭೇದವಿಲ್ಲದೆ ಎಲ್ಲರನ್ನೂ ಸದ್ಧರ್ಮದ ಬೆಸುಗೆಯಲ್ಲಿ ಒಗ್ಗೂಡಿಸುವ ಭಾವೈಕ್ಯ ಸಂಗಮವಾದ ಈ ಮಹೋತ್ಸವದ ‘ಮಹಾವೇದಿಕೆ’ ಒಂದು ಆಶಾಕಿರಣವಾಗಿದೆ.

12ನೆಯ ಶತಮಾನದ ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಯ ಕಬಂಧಬಾಹುಗಳಿಂದ ರಕ್ಷಿಸಲು ಆಜೀವಪರ್ಯಂತ ಹೋರಾಡಿದರು. ಧರ್ಮದ ತಳಹದಿಯ ಮೇಲೆ ಮಾನವ ಮಾನವರ ಮಧ್ಯೆ ತರತಮ ಭಾವವಿಲ್ಲದೆ ನವ ಸಮಾಜವನ್ನು

ನಿರ್ಮಿಸಿ, ಸದ್ಧರ್ಮ ಪೀಠವನ್ನು ಸ್ಥಾಪಿಸಿದರು. ಮಾಘ ಶುದ್ಧ ಪೂರ್ಣಿಮೆಯಂದು ತಮ್ಮ  ಶಿಷ್ಯ ತೆಲಗುಬಾಳು ಸಿದ್ಧನನ್ನು ಸದ್ಧರ್ಮ ಪೀಠದಲ್ಲಿ ಕುಳ್ಳಿರಿಸಿ ‘ತರಳಾ, ಬಾಳು’ ಎಂದು ಹರಸಿದರು. “ತರಳಾ, ಬಾಳು” ಎಂಬ ಪಂಚಾಕ್ಷರಿ ಮಂತ್ರದಲ್ಲಿ ಮಾನವ ಕುಲದ ಅಭ್ಯುದಯವೇ ಅಡಕವಾಗಿದೆ. ಈ ಆಶೀರ್ವಾದದ ಪರಂಪರೆಯಲ್ಲಿ ಸಾಗಿ ಬಂದ ಸದ್ಧರ್ಮ ಪೀಠಾಧಿಪತಿಗಳೇ ತರಳಬಾಳು ಜಗದ್ಗುರುಗಳವರು ಎಂದು ಹೆಸರಾಗಿದ್ದಾರೆ. ಈ ಐತಿಹಾಸಿಕ ಘಟನೆಯು ಜರುಗಿದ ಹುಣ್ಣಿಮೆಯು ನಾಡಿನಲ್ಲಿ “ತರಳಬಾಳು ಹುಣ್ಣಿಮೆ” ಎಂದು ಪ್ರಸಿದ್ಧವಾಗಿದೆ.

ಒಂದು ಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆದುಕೊಂಡು ಬಂದಿರುವ ಈ ಹುಣ್ಣಿಮೆ ಮಹೋತ್ಸವವನ್ನು ಜಾತಿ-ಮತ-ಪಂಥಗಳ ಚೌಕಟ್ಟನ್ನು ಮೀರಿ ನಾಡ ಜನರ ಭಾವೈಕ್ಯತೆಯ ಸಾಧನವನ್ನಾಗಿ ರೂಪಿಸಿದವರು 20ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರಶಿವಾಚಾರ್ಯ ಮಹಾಸ್ವಾಮಿಗಳವರು. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರತಿ ವರ್ಷವೂ ನಾಡಿನ  ಒಳಹೊರಗೆ ಯಶಸ್ವಿಯಾಗಿ ನಡೆದುಕೊಂಡು ಬಂದು ನಾಡಿನ ಪ್ರಮುಖ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ಈ ತರಳಬಾಳು ಹುಣ್ಣಿಮೆ ಮಹೋತ್ಸವವು ಲಿಂಗೈಕ್ಯ ಗುರುಗಳವರ ಕರಕಮಲ ಸಂಜಾತರಾದ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾಸನಾಧೀಶ ಶ್ರೀ  ತರಳಬಾಳು ಜಗದ್ಗುರು ಶ್ರೀ 1108 ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ಥಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ  ಜ್ಞಾನ ದಾಸೋಹದ  ಸಮಾರಂಭವಾಗಿ ಹೊಸ  ಆಯಾಮವನ್ನು ಪಡೆದಿದೆ.

ತರಳಬಾಳು ಹುಣ್ಣಿಮೆ ಆಯಾಯ ಸಂದರ್ಭದ ಸಾಮಾಜಿಕ ಮತ್ತು ಧಾರ್ಮಿಕ ಸಂಕಷ್ಟಗಳನ್ನು ಪರಿಹರಿಸಿ ಸಮುದಾಯದ ಒಳಿತಿಗೆ ಶ್ರಮಿಸುವ  ಮಾನವೀಯತೆಯ ಮಹೋತ್ಸವವೆಂದೇ ಹೆಸರಾಗಿದೆ.

ಜನರ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳುವ  ಸಮಾಮುಖಿಯ  ಹಬ್ಬವಾಗಿ  ಹತ್ತಾರು ಐತಿಹಾಸಿಕ   ಜನಪರ  ಯೋಜನೆಗಳು ಸಾಕಾರವಾಗಲು  ದಿವ್ಯ ವೇದಿಕೆಯಾಗಿದೆ. ಭೂಕಂಪ, ಬರಗಾಲ, ಅನಾವೃಷ್ಠಿಯಂತಹ ಪ್ರಾಕೃತಿಕ  ಸಮಸ್ಯೆಗಳು ನಾಡಿನಲ್ಲಿ ತಲೆದೋರಿದಾಗ  ಸಮಸ್ಯೆಗಳಿಗೆ ಉತ್ತರದಾಯಿಯಾಗಿ ಸರಳವಾಗಿ ಅರ್ಥಪೂರ್ಣವಾಗಿ ಮಹೋತ್ಸವವನ್ನು ಆಚರಿಸಲಾಗಿದೆ.

2020 ರಲ್ಲಿ  ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕು   ಐತಿಹಾಸಿಕ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನದ  ಪೂಜ್ಯ ಶ್ರೀ ತರಳಬಾಳು ಜಗದ್ಗುರುಗಳವರ ಆಶೀರ್ವಾಣಿಯಲ್ಲಿ  2021ರ ಫೆಬ್ರವರಿ ತಿಂಗಳಿನಲ್ಲಿ ಕೊಟ್ಟರೂ ಪಟ್ಟಣದಲ್ಲಿ ನಡೆಯಲಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಮುಂದೂಡಿ  ಕೊರೊನಾ  ಮಹಾಮಾರಿಯ ಕಾರಣದಿಂದ ಸರ್ಕಾರದ ಆದೇಶ ಮೀರದಂತೆ, ಸಂಪ್ರದಾಯ ಮುರಿಯದಂತೆ ಸರಳವಾಗಿ ಆಚರಿಸಲು ನಿಶ್ಚಯಿಸಿ  19-02-2021 ರಿಂದ 27-02-2021 ರವರೆಗೆ   ಅಂತರ್ಜಾಲದಲ್ಲಿ  ಸಭಾ ಕಾರ್ಯಕ್ರಮಕ್ಕೆ  ಮಾತ್ರ  ಸೀಮಿತಗೊಳಿಸಿ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು  ಆಚರಿಸಲು ಶ್ರೀ ಜಗದ್ಗುರುಗಳವರು ಸಂಕಲ್ಪಿಸಿದ್ದಾರೆ.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top