ದಾವಣಗೆರೆ: ಕ್ಯಾನ್ಸರ್ ಖಾಯಿಲೆಯನ್ನು ಪ್ರಾಥಮಿಕ ಹಂತದಲ್ಲೇ ಗುರುತಿಸಿ, ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್ ತಿಳಿಸಿದರು.
ವಿಶ್ವ ಕ್ಯಾನ್ಸರ್ ಜಾಗೃತಿ ದಿನದ ಅಂಗವಾಗಿ ಾಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಕ್ಯಾನ್ಸರ್ ಕುರಿತು ಜನರಲ್ಲಿ ಮಾಹಿತಿ ಮತ್ತು ಅರಿವಿನ ಕೊರತೆ ಇದೆ. ಕ್ಯಾನ್ಸರ್ ಕುರಿತು ಅರಿವು ಮೂಡಿಸುವ ಮೂಲಕ ಮತ್ತು ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ನೀಡುವುದರಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದರು.
ಆಶಾ ಕಾರ್ಯಕರ್ತೆಯರು ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮಗಳಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಮುದಾಯದಲ್ಲಿ ಪ್ರತಿ ಮನೆಗೂ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರನ್ನು ಗುರುತಿಸಿ ಸಮುದಾಯ ಆಧಾರಿತ ತಾಳೆ ಪಟ್ಟಿಯನ್ನು ತುಂಬಿ ಅದರಲ್ಲಿ 4 ಕ್ಕಿಂತ ಹೆಚ್ಚು ಅಂಕಗಳನ್ನು ಹೊಂದಿರುವವರನ್ನು ಕಡ್ಡಾಯವಾಗಿ ಹತ್ತಿರದ ಪ್ರಾದೇಶಿಕ ಆರೋಗ್ಯ ಕೇಂದ್ರಕ್ಕೆ ಕರೆದು ತಪಾಸಣೆಗೆ ಒಳಪಡಿಸುವ ಮೂಲಕ ಕ್ಯಾನ್ಸರ್ ರೋಗವನ್ನು ತಡೆಗಟ್ಟಬೇಕು ಎಂದು ತಿಳಿಸಿದರು.
ಡಾ. ಲಿಂಗನಗೌಡ ಪಾಟೀಲ್ ಮಾತನಾಡಿ, ಪ್ರಾಥಮಿಕ ಹಂತದಲ್ಲಿ ಲಕ್ಷಣಗಳನ್ನು ಕಂಡುಹಿಡಿಯುವ ಮೂಲಕ ಕ್ಯಾನ್ಸರ್ ರೋಗವನ್ನು ತಡೆಗಟ್ಟಬಹುದು. ಐಸಿಎಂಆರ್-2020 ರ ಸಮೀಕ್ಷೆ ಪ್ರಕಾರ ನಮ್ಮ ದೇಶದಲ್ಲಿ ಅಂದಾಜು 13,92,179 ಕ್ಯಾನ್ಸರ್ ರೋಗಿಗಳಿದ್ದಾರೆ. ಪ್ರಮುಖವಾಗಿ ಗರ್ಭಕಂಠದ ಕ್ಯಾನ್ಸರ್ ಅತೀ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ನಂತರ ಸ್ತನ ಕ್ಯಾನ್ಸರ್, ತದನಂತರ ಬಾಯಿ ಕ್ಯಾನ್ಸರ್ ರೋಗಿಗಳು ಕಂಡುಬರುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾವಂತರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆಯಲು ಮಾನಸಿಕವಾಗಿ ಹಿಂಜರಿದು, ಕೊನೆಯ ಎರಡು ಹಂತದಲ್ಲಿ ಬಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ವೈದ್ಯರು ಎಷ್ಟೇ ಚಿಕಿತ್ಸೆ ನೀಡಿದರು ಸಹ 5 ರಿಂದ 7 ವರ್ಷದ ವರೆಗೆ ಮಾತ್ರ ಜೀವಿತಾ ಅವಧಿಯನ್ನು ಮುಂದೂಡಲು ಸಾಧ್ಯವಾಗುತ್ತಿದೆಯೇ ಹೊರತು ಪೂರ್ಣ ಪ್ರಮಾಣದಲ್ಲಿ ವಾಸಿಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವಂತಹ ಕೆಲಸಗಳು ಅತೀ ಹೆಚ್ಚಾಗಿ ಆಗಬೇಕು ಎಂದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನಾಗರಾಜ ಮಾತನಾಡಿ, ಪ್ರಾದೇಶಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಗ್ರಾಮಗಳ ಜನರಿಗೆ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಬೇಕು. ಯಾವುದೇ ವ್ಯಕ್ತಿಯಲ್ಲಿ ಕ್ಯಾನ್ಸರ್ ಸಂಬಂಧಿಸಿದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಮೊದಲ ಹಂತದಲ್ಲಿ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದರು.
ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ಎಸ್.ಎ. ಗಿರಿಧರ್, ಸ್ತನ ಕ್ಯಾನ್ಸರ್, ಗರ್ಭ ಕಂಠದ ಕ್ಯಾನ್ಸರ್ ಮತ್ತು ಉಪಶಾಮಕ ಆರೈಕೆ ಬಗ್ಗೆ ಪಿಪಿಟಿ ಮೂಲಕ ಮಾಹಿತಿ ನೀಡಿದರು. ಕಾಲೇಜ್ ಆಫ್ ಡೆಂಟಲ್ ಸೈನ್ಸ್ನ ಹಿರಿಯ ಪ್ರಾಧ್ಯಾಪಕಿ ಡಾ. ಜಿ.ಪಿ.ಮಮತ ಬಾಯಿ ಕ್ಯಾನ್ಸರ್ ರೋಗದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಮೀನಾಕ್ಷಿ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಕೆ.ಹೆಚ್.ಗಂಗಾಧರ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಪಿ.ಡಿ. ಮುರುಳಿಧರ್, ಜಿಲ್ಲಾ ಮಲೇರಿಯ ನಿಯಂತ್ರಣ ಅಧಿಕಾರಿ ಡಾ.ನಟರಾಜ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರೇಣುಕಾರಾಧ್ಯ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಸುರೇಶ್ ಭಾರ್ಕಿ ಸೇರಿದಂತೆ ಜಿಲ್ಲೆಯ ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.