ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಕ್ಕೇರಲು ಕಾಂಗ್ರೆಸ್, ಬಿಜೆಪಿ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಬಿಜೆಪಿ ಎರಡನೇ ಅವಧಿಗೆ ಮಹಾನಗರ ಪಾಲಿಕೆ ಗದ್ದುಗೆ ಹಿಡಿಯಲು ಕಾರ್ಯತಂತ್ರ ರೂಪಿಸಿಕೊಂಡಿದ್ದು, ಕ್ರಾಂಗ್ರೆಸ್ ಕೂಡ ಪ್ರತಿ ತಂತ್ರ ಎಣೆದುಕೊಂಡಿದೆ.
ಕಳೆದ ಬಾರಿಯ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಆದರೆ, ಈ ಬಾರಿ ಗೆಲ್ಲಲ್ಲೇಬೇಕು ಎಂಬ ಜಿದ್ದಿಗೆ ಕಾಂಗ್ರೆಸ್ ಬಿದ್ದಿದೆ. ಬಿಜೆಪಿ ಕೂಡ ಈಗಾಗಲೇ ಗೆಲುವಿಗೆ ಬೇಕಾದ ಸಿದ್ಧತೆ ಮಾಡಿಕೊಂಡಿದೆ. ಫೆ. 24 ರಂದು ಚುನಾವಣೆ ನಡೆಯಲಿದ್ದು, ಎರಡು ವಾರದ ಮುಂಚೆಯೇ ಕಾಂಗ್ರೆಸ್- ಬಿಜೆಪಿ ನಡುವೇ ಟಾಕ್ ವಾರ್ ಶುರುವಾಗಿದೆ.
ಬಿಜೆಪಿ ಸಂಖ್ಯಾ ಬಲ ಇಲ್ಲದಿದ್ದರೂ, ವಾಮ ಮಾರ್ಗದ ಮೂಲಕ ವಿಧಾನ ಪರಿಷತ್ ಸದಸ್ಯರನ್ನು ಸೇರಿಸಿಕೊಂಡು ಚುನಾವಣೆ ಗೆಲ್ಲಲು ಮುಂದಾಗಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಕಾನೂನು ಪ್ರಕಾರವೇ ಮೇಯರ್ ಮತದಾನ ನಡೆಯುತ್ತಿದ್ದು, ಯಾವುದೇ ವಾಮಮಾರ್ಗ ಅನುಸರಿಸುತ್ತಿಲ್ಲ ಎಂದು ಬಿಜೆಪಿ ನಾಯಕರು ಪ್ರತಿಪಾದಿಸುತ್ತಿದ್ದಾರೆ.
ಮೇಯರ್, ಉಪ ಮೇಯರ್, ಸ್ಥಾಯಿ ಸಮಿತಿಗಳ ಮತದಾನಕ್ಕೆ ಒಟ್ಟು 58 ಸದಸ್ಯರು ಅರ್ಹರಾಗಿದ್ದಾರೆ. ಇದರಲ್ಲಿ ಬಿಜೆಪಿಯಿಂದ 30 ಸದಸ್ಯರು ಮತದಾನ ಅರ್ಹತೆ ಪಡೆದಿದ್ದಾರೆ. ಕಾಂಗ್ರೆಸ್ ನಿಂದ ಜೆಡಿಎಸ್1 ಮತ್ತು ಪಕ್ಷೇತರ 1 ಸದಸ್ಯ ಬಲದಿಂದ 28 ಸದಸ್ಯರು ಮತದಾನ ಮಾಡಲು ಅರ್ಹತೆ ಹೊಂದಿದ್ದಾರೆ. ಮತದಾನಕ್ಕೆ ಒಂದು ವೋಟ್ ಕೂಡ ಮಹತ್ವ ಪಡೆದುಕೊಂಡಿದ್ದು, ಎರಡೂ ಪಕ್ಷಗಳು ಕೊನೆಯವರೆಗೆ ಹೋರಾಟ ನಡೆಸಲಿವೆ.
- ಬಿಜೆಪಿ- ಒಟ್ಟು 30 ಸದಸ್ಯರು
- ಪಾಲಿಕೆ ಸದಸ್ಯರು-21
- ವಿಧಾನ ಪರಿಷತ್-07
- ವಿಧಾನ ಸಭೆ -01
- ಸಂಸದರು 01
- ಕಾಂಗ್ರೆಸ್- ಒಟ್ಟು 28 ಸದಸ್ಯರು
- ಪಾಲಿಕೆ ಸದಸ್ಯರು 21
- ವಿಧಾನ ಪರಿಷತ್ 04
- ವಿಧಾನ ಸಭೆ 01
- ಪಕ್ಷೇತರರು 01
- ಜೆಡಿಎಸ್ 01
ಪಾಲಿಕೆಯ ಒಟ್ಟು 45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22, ಬಿಜೆಪಿ 17, ಜೆಡಿಎಸ್ 1, ಪಕ್ಷೇತರ 5 ಮಂದಿ ಗೆದ್ದಿದ್ದರು. ಕಾಂಗ್ರೆಸ್ ನಿಂದ ಒಬ್ಬ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಒಂದು ಸ್ಥಾನ ಕಳೆದುಕೊಂಡಿದೆ. ಇದರಿಂದ ಕಾಂಗ್ರೆಸ್ 21+1 ಪಕ್ಷೇತರ+ 1 ಜೆಡಿಎಸ್ ಸದಸ್ಯರು, 01 ಶಾಸಕ+04 ಎಂಎಲ್ ಸಿಗಳು ಸೇರಿ ಒಟ್ಟು 28 ಸದಸ್ಯರನ್ನು ಹೊಂದಿದೆ. ಬಿಜೆಪಿಗೆ 17ಸ್ಥಾನದಲ್ಲಿ ಗೆದ್ದಿದ್ದು, 4 ಬಿಜೆಪಿ ಬಂಡಾಯ ಸದಸ್ಯರು ಪಕ್ಷೇತರಾಗಿ ಸ್ಪರ್ಧಿಸಿ ಗೆದ್ದಿದ್ದು, ಚುನಾವಣೆ ಬಳಿಕೆ ಬಿಜೆಪಿ ಸೇರಿಕೊಂಡಿದ್ದಾರೆ. ಇದರೊಂದಗಿಗೆ ಬಿಜೆಪಿ 17 +4 ಪಕ್ಷೇತರರು+07 ಎಂಎಲ್ ಸಿ + 1 ಶಾಸಕ+ 1 ಸಂಸದ ಸೇರಿ ಒಟ್ಟು 30 ಸದಸ್ಯರಿದ್ದಾರೆ. ಹೀಗಾಗಿ ಮೇಯರ್ ಚುನಾವಣೆ ತೀವ್ರ ಕುತೂಹಲ ಮೂಡಿಸಿದೆ.
-ಮುನಿಕೊಂಡಜ್ಜಿ



