ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ಸೇವೆ, ಶಾಲಾ – ಕಾಲೇಜು, ಮಾರುಕಟ್ಟೆ ಸಹಜ ಸ್ಥಿತಿಯತ್ತ ಮರಳುತ್ತಿವೆ. ಆದರೆ ಫೆಬ್ರವರಿ 28ರವರೆಗೆ ರಾಜ್ಯದ ಚಿತ್ರ ಮಂದಿರಗಳಲ್ಲಿ ಶೇಕಡಾ 50ರಷ್ಟು ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಿ ಸರ್ಕಾರ ಆದೇಶ ಹೊರಡಿಸಿದ್ದು ಸ್ಯಾಂಡಲ್ ವುಡ್ ಕಣ್ಣು ಕೆಂಪಗಾಗಿಸಿದೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ, ಮಾರ್ಕೆಟ್ನಲ್ಲಿ ಗಿಜಿ ಗಿಜಿಗುಡುತ್ತಿರುವ ಜನ, ಬಸ್ನಲ್ಲೂ ಜನರ ಹಿಂಡೇ ತುಂಬಿರುತ್ತೆ. ಇದ್ಯಾವುದಕ್ಕೂ ಹಾಕದ ನಿರ್ಬಂಧವನ್ನ ಥಿಯೇಟರ್ಗಳಿಗೆ ಮಾತ್ರ ಏಕೆ ಹಾಕಿದ್ದೀರಿ..? ಎಂದು ರಾಜ್ಯ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ʼಪೊಗರುʼ ಸಿನಿಮಾ ಇದೇ ತಿಂಗಳ 19 ರಂದು ತೆರೆ ಕಾಣಲಿದೆ. ಈ ನಡುವೆ ರಾಜ್ಯ ಸರ್ಕಾರದ ಈ ಕ್ರಮದಿಂದ ಬೇಸರಗೊಂಡಿರುವ ಧ್ರುವ ಸರ್ಜಾ, ಸರ್ಕಾರಕ್ಕೆ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದಾರೆ. ಧ್ರುವ ಸರ್ಜಾ ಮಾತ್ರವಲ್ಲದೇ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಬಹುತೇಕ ಸದಸ್ಯರು ಈ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.
@drashwathcn @CMofKarnataka @mla_sudhakar #KFIrequestsfulloccupancy pic.twitter.com/S7rxIUlAPM
— Dhruva Sarja (@DhruvaSarja) February 3, 2021
ಕೊರೊನಾ ಸಂಬಂಧ ಹೊಸ ಮಾರ್ಗಸೂಚಿ ಹೊರಡಿಸಿದ್ದ ಕೇಂದ್ರ ಸರ್ಕಾರ 100 ಪ್ರತಿಶತ ಸೀಟು ಭರ್ತಿಗೆ ಅವಕಾಶ ನೀಡಬಹುದೆಂದು ಹೇಳಿತ್ತು. ಆದರೆ ಈ ವಿಚಾರವಾಗಿ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನ ಆಯಾ ರಾಜ್ಯ ಸರ್ಕಾರಗಳಿಗೆ ನೀಡಿದೆ.



