ಬೆಂಗಳೂರು: ರಾಜ್ಯಪಾಲರು ಸರ್ಕಾರ ಬರೆದುಕೊಟ್ಟಿದನ್ನು ಓದುತ್ತಾರೆ. ಆದರೆ ಭಾಷಣದಲ್ಲಿ ಸ್ಪಷ್ಟತೆ ಇರಬೇಕು. ಸರ್ಕಾರದ ನಿಲುವು, ಯೋಜನೆಗಳು, ಧ್ಯೆಯ ಧೊರಣೆಗಳು, ಮುನ್ನೋಟ ಇರಬೇಕು. ಆದರೆ, ಈ ಭಾಷಣ ನೋಡಿದಾಗ ಯಾವುದೂ ಕಾಣಿಸುವುದಿಲ್ಲ. ಹೀಗಾಗಿ ರಾಜ್ಯಪಾಲರ ಸುಳ್ಳಿನ ಕಂತೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಉಭಯ ಸದನಗಳನ್ನು ಉದ್ದೇಶಿಸಿ ರಾಜ್ಯಪಾಲರ ಭಾಷಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರ ಬಾಯಿಯಿಂದ ಸರ್ಕಾರ ಸುಳ್ಳು ಹೇಳಿಸಿದೆ. ನಮ್ಮ ಸರ್ಕಾರದ ಸಾಧನೆಗಳನ್ನೇ ಪುನರುಚ್ಚಾರ ಮಾಡಿಸಿದ್ದಾರೆ. ಭಾಷಣಕ್ಕೆ ಗೊತ್ತು ಗುರಿ ಏನೂ ಇಲ್ಲ ಎಂದು ಕಿಡಿಕಾರಿದರು.
ಭಾಷಣದಲ್ಲಿ ಹಣಕಾಸಿನ ಪರಿಸ್ಥಿತಿ ಬಗ್ಗೆ ಪ್ರಸ್ತಾಪ ಮಾಡಿಲ್ಲ. ರಾಜ್ಯ ಅಭಿವೃದ್ಧಿಯಲ್ಲಿ ಹತ್ತು ವರ್ಷಗಳಷ್ಟು ಹಿಂದೆ ಹೋಗಿದೆ. ಎಲ್ಲೆಲ್ಲೂ ಕೊರೊನಾ ನೆಪ ಹೇಳುತ್ತಿದ್ದಾರೆ. ನಿರಾವರಿ ಯೋಜನೆಗಳಿಗೆ ಹಣ ಇಲ್ಲ. ಶಾಸಕರ ಕ್ಷೇತ್ರದ ನಿಧಿ ಕೇಳಿದರೂ ಕೊರೊನಾ ಎನ್ನುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಅಧಿಕಾರಕ್ಕೆ ಬಂದು ಒಂದು ವರ್ಷ ಏಳು ತಿಂಗಳಾಯಿತು. ಈ ಸರ್ಕಾರದ ಸಾಧನೆ ಶೂನ್ಯ. ಇದು ರಾಜ್ಯದ ಪ್ರಗತಿಯ ಯಾವುದೇ ದೂರದೃಷ್ಟಿ ಇಲ್ಲದ ಭಾಷಣ. ಕರ್ನಾಟಕದ ಇತಿಹಾಸದಲ್ಲಿ ಇಂತಹ ಕಳಪೆ ಭಾಷಣ ನಾನು ನೋಡಿರಲಿಲ್ಲ ಎಂದು ಕುಟುಕಿದರು.
ಉಮೇಶ್ ಕತ್ತಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮಾತಾಡ್ತಾರೆ. ಇವರಿಗೆ ಉತ್ತರ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಬೆಳಗಾವಿಯಲ್ಲಿ ಎರಡು ಬಾರಿ ಅಧಿವೇಶನ ಮಾಡಬೇಕಿತ್ತು. ಸುವರ್ಣ ಸೌಧ ಕಟ್ಟಿಸಿರೊದು ಯಾಕೆ? ಇವರಿಗೆ ಬದ್ಧತೆ ಇಲ್ಲ. ಐದು ವರ್ಷ ಅಲ್ಲಿ ಅಧಿವೇಶನ ಮಾಡಿದ್ದೆವು. ಉತ್ತರ ಕರ್ನಾಟಕದ ಜನರಿಗೆ ಮಾಡಿದ ದ್ರೋಹ ಇದು. ನಾನು ಇಲಾಖೆಗಳನ್ನು ಸ್ಥಳಾಂತರ ಮಾಡಲು ಆದೇಶ ಮಾಡಿದ್ದೆ. ಅದನ್ನು ಪಾಲನೆ ಮಾಡಿಲ್ಲ ಎಂದರು.
ಮಹಾರಾಷ್ಟ್ರದ ಸಿಎಂ ಉದ್ಧಟತನದಿಂದ ಮಾತನಾಡುತ್ತಾರೆ. ಅವರು ಬೇಜವಾಬ್ದಾರಿತನದಿಂದ ಮಾತನಾಡುತ್ತಾರೆ. ಮಹಾಜನ ವರದಿ ಅಂತಿಮ. ಈಗ ಗಡಿ ಸಮಸ್ಯೆಯೇ ಇಲ್ಲ. ಆದರೆ ಅವರು ತಮ್ಮ ಅಸ್ತಿತ್ವಕ್ಕಾಗಿ ಮಾತನಾಡುತ್ತಾರೆ. ಅವರ ಉದ್ಧಟತನ ಸಹಿಸುವುದಿಲ್ಲ.ಉಪ ಸಭಾಪತಿ ಸ್ಥಾನಕ್ಕೆ ಅಭ್ಯರ್ಥಿ ನಿಲ್ಲಿಸುತ್ತೇವೆ. ಆತ್ಮಸಾಕ್ಷಿಯಾಗಿ ಮತ ಹಾಕುತ್ತಾರೆ ಎನ್ನುವ ವಿಶ್ವಾಸವಿದೆ. ಸೋಲು -ಗೆಲುವು ಮುಖ್ಯವಲ್ಲ ಎಂದ ಅವರು, ಜೆಡಿಎಸ್ ನವರು ಜಾತ್ಯತೀತ ಪಕ್ಷ ಎಂದು ಹೇಳುತ್ತಾರೆ. ಇದೀಗ ಏನು ಎಂದು ಎಲ್ಲರಿಗೂ ಗೊತ್ತಾಗಿದೆ ಎಂದರು.