ದಾವಣಗೆರೆ: ಕುಂದವಾಡ ಕೆರೆ ಅಭಿವೃದ್ಧಿ ಹೆಸರಲ್ಲಿ ಹಾಳು ಮಾಡುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಸಲಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿನ ಮೂಲವಾಗಿರುವ ಕುಂದುವಾಡ ಕೆರೆಯನ್ನು ಅಭಿವೃದ್ಧಿ ಹೆಸರಲ್ಲಿ ಹಾಳು ಮಾಡಲಾಗುತ್ತಿದೆ. ಬಿಜೆಪಿ ಕೆರೆ ಅಭಿವೃದ್ಧಿ ಹೆಸರಲ್ಲಿ ಹಣ ಎತ್ತುವ ಕಾರ್ಯವಾಗಿದೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.
ಕೆರೆಯ ಅಭಿವೃದ್ಧಿಗೆ 15 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಈ ಮೊತ್ತದಲ್ಲಿ ನಗರದ ಎಲ್ಲ ಕೆರೆಗಳನ್ನು ಅಭಿವೃದ್ಧಿಪಡಿಸಬಹುದು. ಮೂರ್ನಾಲ್ಕು ಕೋಟಿಯಲ್ಲಿ ಆಗುವ ಅಭಿವೃದ್ಧಿಗೆ ಬೃಹತ್ ಮೊತ್ತ ಮಂಜೂರು ಮಾಡಿರುವುದೇಕೆ ಎಂದು ಪ್ರಶ್ನಿಸಿದರು.
ಮಾಜಿ ಸಚಿವ ಮಲ್ಲಿಕಾರ್ಜುನ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಎಂಜಿನಿಯರ್ ಜೊತೆ ಚರ್ಚಿಸಿದ್ದು, 15 ಕೋಟಿಯ ಕೆಲಸವನ್ನು 7 ಕೋಟಿ ವೆಚ್ಚದಲ್ಲಿ ಮಾಡಬಹುದು. ಈ ಹಣದಲ್ಲಿ ದಾವಣಗೆರೆಯ ಎಲ್ಲಾ ಕೆರೆಗಳನ್ನು ಅಭಿವೃದ್ಧಿಪಡಿಸಬಹುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.
ನಗರದಲ್ಲಿ ಕುಡಿಯುವ ನೀರಿಗೆ ತೊಂದರೆ ಇಲ್ಲ ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಅವರು ಈಚೆಗೆ ಹೇಳಿದ್ದಾರೆ. ಆದರೆ ಈಗ 8 ದಿನಗಳಿಗೊಮ್ಮೆ ನೀರು ಬರುತ್ತಿದೆ. ಹಳೇ ದಾವಣಗೆರೆ ಭಾಗದಲ್ಲಿ 12-13 ದಿನಗೊಳಿಗೊಮ್ಮೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜನವರಿಯಲ್ಲಿ ಈ ಪರಿಸ್ಥಿತಿ ಇದೆ. ಇನ್ನು ಏಪ್ರಿಲ್, ಮೇ ತಿಂಗಳಲ್ಲಿ ಗತಿ ಏನು, ಈ ಕಾಮಗಾರಿ ಮಾಡುವ ಅಗತ್ಯವಿತ್ತೇ ಎಂದು ಪ್ರಶ್ನಿಸಿದರು.
ಮಹಿಳಾ ಕಾಂಗ್ರೆಸ್ ಜಿಲ್ಲಾ ಘಟಕದ ಅನಿತಾಬಾಯಿ ಮಾಲತೇಶ್, ಮುಖಂಡರಾದ ಅಯೂಬ್ ಪೈಲ್ವಾನ್, ಶ್ರೀಕಾಂತ್ ಬಗೇರ, ಶಿವಮೂರ್ತಿ, ಯುವರಾಜ್, ರವಿ ಗೋಷ್ಠಿಯಲ್ಲಿ ಇದ್ದರು.



