ಬೆಳಗಾವಿ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಪಿಎಸ್ ಐ ಸೇರಿ ನಾಲ್ವರು ಪ್ರಾಣ ಕಳೆದುಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಚಚಡಿ ಕ್ರಾಸ್ ಸಮೀಪ ನಡೆದಿದೆ.
ಬೆಳಗಾವಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್‌ಐ ಲಕ್ಷ್ಮೀ ಪವಾರ್, ಪ್ರಸಾದ್ ಪವಾರ್, ಅಂಕಿತಾ ಪವಾರ್ ಹಾಗು ದೀಪಾ ಶಹಾಪುರಕರ್ ಮೃತ ದುರ್ದೈವಿಗಳು. ಇವರೆಲ್ಲಾ ಬೆಳಗಾವಿಯ ಸಹ್ಯಾದ್ರಿ ನಗರ ನಿವಾಸಿಗಳೆಂದು ತಿಳಿದುಬಂದಿದೆ.
ಯರಗಟ್ಟಿಯಿಂದ ಬೆಳಗಾವಿಯತ್ತ ಬರುತ್ತಿದ್ದ ಕಾರಿಗೆ ಬೆಳಗಾವಿಯಿಂದ ಯರಗಟ್ಟಿಗೆ ಹೊರಟಿದ್ದ ಸರ್ಕಾರಿ ಬಸ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ನುಜ್ಜುಗುಜ್ಜಾಗಿದ್ದು ಕ್ರೇನ್ ಮೂಲಕ ಕಾರನ್ನು ಹೊರತೆಗೆವ ಕೆಲಸ ನಡೆದಿದೆ. ಸ್ಥಳಕ್ಕೆ ಮುರಗೋಡ ಪೊಲೀಸರು ಭೇಟಿ ನೀಡಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆಈ ನಡುವೆ ಬೆಳಗಾವಿಯಿಂದ ಬಾಗಲಕೋಟೆಗೆ ಹೊರಟಿದ್ದ ಸಚಿವ ಮುರುಗೇಶ್ ನಿರಾಣಿ ಅಪಘಾತದ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿದ್ದಾರೆ.ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ.