ಬಯಲುಸೀಮೆ ಪ್ರದೇಶಾಭಿವೃದ್ಧಿಗೆ 67.67 ಕೋಟಿ ಬಿಡುಗಡೆಗೆ ಸರ್ಕಾರಕ್ಕೆ ಮನವಿ: ಎನ್.ಇ. ಜೀವನಮೂರ್ತಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
3 Min Read

ದಾವಣಗೆರೆ:ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ 1, 724 ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಲುವಾಗಿ ಪ್ರಸಕ್ತ ವರ್ಷದಲ್ಲಿ 67. 67 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಎನ್.ಇ.ಜೀವನಮೂರ್ತಿ ಹೇಳಿದರು.

ಜಗಳೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರದಂದು ಅಧಿಕಾರಿಗಳೊಂದಿಗೆ ಏರ್ಪಡಿಸಿದ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಡಾ. ಬಿ.ಎಂ.ನಂಜುಂಡಪ್ಪ ವರದಿಯ ಆಧಾರ ಮೇಲೆ ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯು 1995ರಿಂದ ಜಾರಿಗೆ ಬಂದಿದ್ದು, ಕಡಿಮೆ ಮಳೆಯ ಕಾರಣ ಪದೇ ಪದೇ ಬರ ಪರಿಸ್ಥಿತಿ ಎದುರಿಸುವ ಪ್ರದೇಶಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಅಸಮತೋಲನ ನಿವಾರಣೆಗಾಗಿ ಮಂಡಳಿ ರಚನೆಯಾಗಿದೆ. ಈ ಪ್ರದೇಶಗಳ ಕೃಷಿ ತತ್ಸಂಬಂಧಿತ ಚಟುವಟಿಕೆಗಳಾದ ಕೃಷಿ, ತೋಟಗಾರಿಕೆ, ಅರಣ್ಯ, ಪಶು ಸಂಗೋಪನೆ, ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಿಗೆ, ಅದರಲ್ಲೂ ಪ್ರಮುಖವಾಗಿ ಈ ಭಾಗದ ವ್ಯಾಪ್ತಿಯಲ್ಲಿ ಅಂತರ್ಜಲ ಹೆಚ್ಚಳಕ್ಕೆ ಪ್ರಮುಖ ಆದ್ಯತೆ ನೀಡಲಾಗುತ್ತಿದೆ ಎಂದರು.
ರಾಜ್ಯದ ಬಾಗಲಕೋಟೆ, ಬೆಳಗಾವಿ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೋಲಾರ, ರಾಮನಗರ, ತುಮಕೂರು, ವಿಜಯಪುರ ಜಿಲ್ಲೆ ಸೇರಿದಂತೆ ಒಟ್ಟು 14 ಜಿಲ್ಲೆಗಳನ್ನೊಳಗೊಂಡ 58 ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಬರುವ 70 ವಿಧಾನಸಭಾ ಕ್ಷೇತ್ರಗಳು ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿವೆ. 14 ಲೋಕಸಭಾ ಸದಸ್ಯರು, 70 ವಿಧಾನಸಭಾ ಸದಸ್ಯರು, 24 ವಿಧಾನಪರಿಷತ್ತು ಸದಸ್ಯರು, 10 ಮಂಡಳಿಯ ನಾಮನಿರ್ದೇಶಿತ ಸದಸ್ಯರು, 14 ಜಿಲ್ಲಾ ಪಂಚಾಯತ್ ಸದಸ್ಯರು, 14 ಜಿಲ್ಲಾಧಿಕಾರಿಗಳು ಹಾಗೂ ಒಬ್ಬ ಕಾರ್ಯದರ್ಶಿ ಸೇರಿದಂತೆ ಒಟ್ಟು 147 ಮಂದಿ ಮಂಡಳಿಯ ಸದಸ್ಯರಿದ್ದಾರೆ. ಮಂಡಳಿ ವ್ಯಾಪ್ತಿಯಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕು ಮಾತ್ರ ಬರಲಿದ್ದು, ಈ ಭಾಗದಲ್ಲಿ ಮಳೆಯ ಕೊರತೆ ಅಲ್ಲದೆ ಶಾಶ್ವತ ನೀರಿನ ಯಾವುದೇ ಮೂಲ ಲಭ್ಯವಿಲ್ಲ. ಹೀಗಾಗಿ ಈ ಭಾಗದಲ್ಲಿ ನೀರಿನ ಕೊರತೆ ಕಾಡುವುದು ಸಹಜ. ಹೀಗಾಗಿ ಇಲ್ಲಿ ಅಂತರ್ಜಲ ಹೆಚ್ಚಳಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಲ್ಲಿ ವಿವಿದೋದ್ದೇಶದಿಂದ ಕೂಡಿದ ಕಾಮಗಾರಿಗಳು ಅಂದರೆ ರಸ್ತೆಯ ಮೇಲೆ ಹರಿಯುವ ಹಳ್ಳಕ್ಕೆ ಬಂದಾರ ನಿರ್ಮಿಸಿ, ಸುತ್ತಮುತ್ತಲ ಜಮೀನುಗಳ ಬೋರ್‍ವೆಲ್‍ಗಳನ್ನು ರಿಜಾರ್ಚ್ ಮಾಡಲು, ದನ ಕರುಗಳಿಗೆ, ನೀರಿನ ವ್ಯವಸ್ಥೆ ಮತ್ತು ಸಾರ್ವಜನಿಕರ ಉಪಯೋಗಕ್ಕಾಗಿ ಊರಿಂದ ಊರಿಗೆ ಸಂಪರ್ಕ ಕಲ್ಪಿಸಿ, ಸಂಚರಿಸಲು ಅನುಕೂಲ ಕಲ್ಪಿಸುವಂತಹ ಕಾಮಗಾರಿಗಳು, ಸರ್ಕಾರಿ ಜಮೀನುಗಳಲ್ಲಿ ಚೆಕ್‍ಡ್ಯಾಂ ನಿರ್ಮಾಣ, ಸಣ್ಣ ಕೆರೆಗಳ ಬದು ಮತ್ತು ಕೋಡಿ ನಿರ್ಮಾಣ, ಮಳೆ ನೀರು ತಡೆಗೋಡೆ, ಗೋಕಟ್ಟೆ ನಿರ್ಮಾಣ, ಕಲ್ಯಾಣಿಗಳ ಜೀರ್ಣೋದ್ಧಾರ ಮುಂತಾದ ಕಾಮಗಾರಿಗಳು, ಸರ್ಕಾರಿ ಜಾಗಗಳಲ್ಲಿ ಕಿರು ಕಾಲುವೆಗಳು ಇಂಗು ಗುಂಡಿ ನಿರ್ಮಿಸಿ ಅಂತರ್ಜಲ ಹೆಚ್ಚಿಸುವ ಕಾಮಗಾರಿಗಳು ಇತ್ಯಾದಿ, ಅರಣ್ಯೀಕರಣ, ತೋಟಗಾರಿಕೆ, ಸಮುದಾಯ ಕೃಷಿ ಕಾಮಗಾರಿಗಳು, ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ಮಂಡಳಿ ವ್ಯಾಪ್ತಿಯಲ್ಲಿ ಆದ್ಯತೆಯ ಮೇರೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.

2020-21ನೇ ಸಾಲಿನ ಆಯವ್ಯಯದಲ್ಲಿ ಮಂಡಳಿಗೆ 22.73 ಕೋಟಿ ರೂ. ಆರ್ಥಿಕ ಗುರಿ ನಿಗಧಿಪಡಿಸಲಾಗಿತ್ತು. ಮಂಡಳಿಗೆ ಲಭ್ಯವಾದ 16.69 ಕೋಟಿ ರೂ. ಅನುದಾನದಲ್ಲಿ 16.05 ಕೋಟಿ ರೂ. ವೆಚ್ಚವಾಗಿದ್ದು 196 ಕಾಮಗಾರಿಗಳು ಪೂರ್ಣಗೊಂಡಿವೆ. ಇನ್ನೂ 1724 ಕಾಮಗಾರಿಗಳು ಪ್ರಗತಿಯಲ್ಲಿದ್ದು, ವಿವಿಧ ಹಂತದಲ್ಲಿವೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು 85.22 ಕೋಟಿ ರೂ. ಗಳ ಅಗತ್ಯವಿದ್ದು, ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ ಸಾಮಾನ್ಯ ಯೋಜನೆಯಡಿ ನಿಗದಿಪಡಿಸಿದ ಅನುದಾನ 16.72 ಕೋಟಿ ರೂ. ಹಾಗೂ ಆರಂಭಿಕ ಶಿಲ್ಕು ರೂ.83 ಲಕ್ಷ ಸೇರಿ ಒಟ್ಟಾರೆ 17.55 ಕೋಟಿ ರೂ. ಗಳನ್ನು ಬಳಸಿಕೊಂಡರೂ ಇನ್ನೂ 67.67 ಕೋಟಿ ರೂ. ಗಳ ಅನುದಾನದ ಕೊರತೆಯಾಗುತ್ತದೆ. ಹೀಗಾಗಿ ಅನುದಾನ ಬಿಡುಗಡೆ ಮಾಡುವಂತೆ ಈಗಾಗಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 67.67 ಕೋಟಿ ರೂ. ಗಳ ಅನುದಾನವನ್ನು ಇದೇ ಆರ್ಥಿಕ ವರ್ಷದಲ್ಲಿ ಒದಗಿಸಿದಲ್ಲಿ ಬಾಕಿ ಇರುವ ಯೋಜನೆಗಳು ಪೂರ್ಣಗೊಳ್ಳಲಿವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿ.ಪಂ. ಅಧ್ಯಕ್ಷೆ ಶಾಂತಕುಮಾರಿ ಅವರು ಮಾತನಾಡಿ, ಜಗಳೂರು ತಾಲ್ಲೂಕಿನಲ್ಲಿ ಜಿನಿಗೆ ಹಳ್ಳ ಪ್ರಮುಖ ನೀರಿನ ಮೂಲವಾಗಿದ್ದು, ಮಳೆಗಾಲದಲ್ಲಿ ತುಂಬಿ ವ್ಯರ್ಥವಾಗಿ ಮೊಳಕಾಲ್ಮೂರು ಭಾಗಕ್ಕೆ ಹರಿದುಹೋಗುತ್ತದೆ. ಹೀಗಾಗಿ ಈ ಹಳ್ಳಕ್ಕೆ ಚೆಕ್‍ಡ್ಯಾಂ ನಿರ್ಮಿಸಿದಲ್ಲಿ ಅನುಕೂಲವಾಗಲಿದ್ದು, ಈ ಭಾಗದಲ್ಲಿ ಅಂತರ್ಜಲ ಹೆಚ್ಚಳವಾಗುತ್ತದೆ. ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಚೆಕ್‍ಡ್ಯಾಂ ನಿರ್ಮಾಣಕ್ಕೆ ಮುಂದಾದಲ್ಲಿ, ಜಿಲ್ಲಾ ಪಂಚಾಯತ್ ವತಿಯಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಡಳಿ ಅಧ್ಯಕ್ಷರು ಅಧಿಕಾರಿಗಳೊಂದಿಗೆ ಚರ್ಚಿಸಿ, ಮಾಹಿತಿ ಪಡೆದು, ಚೆಕ್‍ಡ್ಯಾಂ ನಿರ್ಮಾಣಕ್ಕೆ ಬರುವ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಬಸವರಾಜಪ್ಪ, ಉಪಕಾರ್ಯದರ್ಶಿ ಕೃಷ್ಣನಾಯ್ಕ್ ಸೇರಿದಂತೆ ವಿವಿಧ ಗಣ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *