ದಾವಣಗೆರೆ : ಜಿಲ್ಲಾ ಬಿಜೆಪಿಯಿಂದ ಜ.11 ರಂದು ‘ಜನಸೇವಕ ಸಮಾವೇಶ’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ ಹೇಳಿದರು.
ರಾಜ್ಯ ಬಿಜೆಪಿ ಘಟಕದ ಸೂಚನೆಯಂತೆ ಇತ್ತಿಚಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಜಯಗಳಿಸಿರುವ 1,614 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನಾ ಸಮಾರಂಭ ಮತ್ತು ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಸಜ್ಜುಗೊಳಿಸುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿದೆ. ಜ. 11 ರಂದು ಮಧ್ಯಾಹ್ನ 2:30 ಕ್ಕೆ ನಗರದ ಹದಡಿ ರಸ್ತೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಳೆದ 2015ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ 1,125 ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದರು. ಆಗ ಜಿಲ್ಲೆಯ 94 ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಅಧಿಕಾರ ಹಿಡಿದಿತ್ತು. ಈಗ 151 ಗ್ರಾಪಂಗಳಲ್ಲಿ ಬಹುಮತದಿಂದ ಗೆಲುವು ಕಂಡಿದ್ದಾರೆ. ಕೆಟಗರಿ ಮೂಲಕ ಇನ್ನೂ ಸುಮಾರು 20 ಗ್ರಾಪಂಗಳಲ್ಲಿ ನಮ್ಮ ಅಭ್ಯರ್ಥಿಗಳೇ ಅಧಿಕಾರ ಹಿಡಿಯುವ ನಿರೀಕ್ಷೆಯಿದೆ ಎಂದರು.
ಪ್ರಸ್ತುತ, ಕೇಂದ್ರದಿಂದ ಗ್ರಾಮಗಳ ಅಭಿವೃದ್ಧಿಗಾಗಿ ಮತ್ತು ಮೂಲ ಸೌಲಭ್ಯಗಳನ್ನು ಒದಗಿಸಲು ನೇರ ಗ್ರಾ.ಪಂಗಳಿಗೆ 20 ಲಕ್ಷದಿಂದ 1.50 ಕೋಟಿ ರೂ., ಅನುದಾನ ಬರುತ್ತಿದೆ. ಶೋಷಿತ ಮತ್ತು ಬಡ ವರ್ಗದವರಿಗೆ ತಲುಪಿಸುವ ಹಲವು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ ಎಂದು ತಿಳಿಸಿದರು.
ಜ.11 ರಂದು ನಡೆಯುವ ಈ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ,ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಸಂಸದ ಶಿವಕುಮಾರ್ ಉದಾಸಿ, ಜಿ.ಎಂ. ಸಿದ್ದೇಶ್ವರ್, ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಶಾಸಕ ಮಾಡಾಳು ವಿರೂಪಾಕ್ಷಪ್ಪ, ಮಂಡಲದ ಎಲ್ಲಾ ಪದಾಧಿಕಾರಿಗಳು, ಮುಖಂಡರು ಸೇರಿದಂತೆ ಸಮಾವೇಶಕ್ಕೆ ಎರಡು ಸಾವಿರಕ್ಕೂ ಅಧಿಕ ಜನರು ಸೇರುವ ನಿರೀಕ್ಷೆಯಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಡಿ.ಎಸ್. ಶಿವಶಂಕರ್, ಮಾಧ್ಯಮ ಪ್ರಮುಖ್ ವಿಶ್ವಾಸ್ ಇದ್ದರು



