ತರಳಬಾಳು ಶ್ರೀ ಜಗದ್ಗುರುಗಳವರಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆಯ ಸಂದೇಶ
ಈ ವರ್ಷ ಹಳೇಬೀಡಿನಲ್ಲಿ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವ ಇಂದಿಗೆ ಸಾರ್ಥಕವಾಯಿತು.ಹಳೇಬೀಡು ಮತ್ತು ಆ ಭಾಗದ ಅನೇಕ ಕೆರೆಗಳನ್ನು ತುಂಬಿಸುವ 124 ಕೋಟಿ ರೂ ಗಳ ರಣಘಟ್ಟ ಯೋಜನೆಗೆ ನೀರಾವರಿ ಯೋಜನೆಗೆ ಈ ದಿನದ ಸಚಿವ ಸಂಪುಟದಲ್ಲಿ ಮಂಜೂರಾತಿ ದೊರಕಿದೆ ಎಂದು ತಿಳಿಸಲು ತುಂಬಾ ಸಂತೋಷವಾಗುತ್ತಿದೆ. ಹೊಸ ವರ್ಷದ ಹರ್ಷಕ್ಕೆ ಇದು ನಾಂದಿಯಾಗಿದೆ.
ಸಹಜವಾಗಿ Gravity ಮೂಲಕ ಸುರಂಗ ಮಾರ್ಗದಲ್ಲಿ ಹಳೇಬೀಡು ಮತ್ತಿತರ ಕೆರೆಗಳಿಗೆ ನೀರು ಹರಿಸುವ ಅಪರೂಪದ ಯೋಜನೆ ಇದಾಗಿದೆ.ಯಗಚಿ ನದಿಯು ಅತ್ಯಂತ ಪ್ರಾಚೀನ ಜೀವಸೆಲೆಯಾಗಿದೆ. ಹೊಯ್ಸಳರ ಕಾಲದಲ್ಲಿ ಈ ನದಿಯಿಂದ ಕೆಲವು ಕಿಲೋಮೀಟರ್ ದೂರ ಒಂದು ಆಳವಾದ ಕಾಲುವೆಯನ್ನು ತೆಗೆಯಲಾಗಿತ್ತು. ಪೂರ್ಣಗೊಂಡಿರಲಿಲ್ಲ. ಅದರ ಅವಶೇಷಗಳು ಈಗಲೂ ಕಾಣಸಿಗುತ್ತವೆ. ಜೆಸಿಬಿ ಹಿಟಾಚಿ ಇಲ್ಲದ ಕಾಲದಲ್ಲಿ ಆಗಿನ ರಾಜರು ತೆಗೆಸಿದ ಈ ಕಾಲುವೆ ಮೈನವಿರೇಳಿಸುವಂತಹುದು.

ಬರಗಾಲದ ಪ್ರಯುಕ್ತ ಒಂದು ವರ್ಷ ಕಾಲ ಮುಂದೂಡಲಾಗಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಹಳೇಬೀಡು ಕೆರೆ ತುಂಬಿಸಿದ ಮೇಲೆಯೇ ಆಚರಿಸಬೇಕೆಂಬ ನಮ್ಮ ಸತ್ಯಸಂಕಲ್ಪ ಈಡೇರಿದಂತಾಗಿದೆ. ಹುಣ್ಣಿಮೆಯ ಮೊದಲೂ ಹಳೇಬೀಡು ಕೆರೆ ತುಂಬಿತು. ಹುಣ್ಣಿಮೆಯ ನಂತರವೂ ತುಂಬಿ ತುಳುಕಿದೆ. ಮುಂದೆ ಶಾಶ್ವತವಾಗಿ ತುಂಬಿ ರೈತರ ಮತ್ತು ಪ್ರವಾಸಿಗರ ಕಣ್ಮನ ಸೆಳೆಯಲಿದೆ.
ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಆಗಮಿಸಿದ್ದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶರಣ ಬಿ. ಎಸ್. ಯಡಿಯೂರಪ್ಪನವರು ಬಹಿರಂಗವಾಗಿ ಆಶ್ವಾಸನೆ ಕೊಟ್ಟ ಪ್ರಕಾರ ಆ ಭಾಗದ ಜನತೆಯ ಅನೇಕ ದಶಕಗಳ ದಾಹವನ್ನು ತಣಿಸಿದ್ದಾರೆ. ಇದರಿಂದ ಹೊಯ್ಸಳ ಸಾಮ್ರಾಜ್ಯ ಮತ್ತೆ ಉದಯಿಸಿದಂತಾಗಿದೆ.
ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಈ ಭಾಗದ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.
– ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸಿರಿಗೆರೆ. ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ