ದಾವಣಗೆರೆ: ಇನ್ನೂ 10 ದಿನಗಳಲ್ಲಿ ದಾವಣಗೆರೆ ಜಿಲ್ಲೆ ಕೊರೊನಾ ಮುಕ್ತವಾಗಲಿದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ, ಜಿಲ್ಲಾ ಯೋಗ ಒಕ್ಕೂಟ ಹಾಗೂ ಹಿಮಾಲಯನ್ ಅಕಾಡೆಮಿ ಸಹಯೋಗದಲ್ಲಿ ಕೊರೋನಾ ವಾರಿಯರ್ಸ್ ಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ನಮ್ಮ ಮನೆಯವರಿಂದ ದಾವಣಗೆರೆ ಜಿಲ್ಲೆಗೆ ಕೊರೊನಾ ಬರಲಿಲ್ಲ. ನಮ್ಮ ಮನೆ ಸದಸ್ಯರಿಗೆ ಬಂದಿದ್ದರೂ ನಾವು ಸರಕ್ಷಿತವಾಗಿದ್ದೇವು. ಆದರೆ, ನಗರದಲ್ಲಿ ಕೊರೊನಾ ಆರ್ಭಟ ಆರಂಭವಾದದ್ದು ಜಾಲಿ ನಗರದಿಂದ, ಈವರೆಗೂ ಜಿಲ್ಲೆಯ 22,059 ಮಂದಿಗೆ ಸೋಂಕು ಬಂದಿತ್ತು. ಈ ಪೈಕಿ 21 ಸಾವಿರ ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಹೇಳಿದರು.
ಕೊರೊನಾ ನಿಯಂತ್ರಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್, ಆಶಾ ಕಾರ್ಯಕರ್ತೆಯರು ಉತ್ತಮವಾಗಿ ಕೆಲಸ ಮಾಡಿವೆ. ಡಿಸಿ, ಎಸ್ಪಿ, ಸಿಇಒ ಈ ಮೂವರ ಸಮನ್ವತೆಯಿಂದ ಕೆಲಸ ಮಾಡಿ, ಕೊರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮೇಯರ್ ಬಿ.ಜಿ.ಅಜಯ ಕುಮಾರ್, ಡಿಸಿ ಮಹಾಂತೇಶ ಬೀಳಗಿ, ಎಸ್ಪಿ ಹನುಮಂತರಾಯ, ಜಿ.ಪಂ. ಸಿಇಒ ಪದ್ಮ ಬಸವಂತಪ್ಪ ಮಾತನಾಡಿದರು. ಜಿಲ್ಲಾ ಯೋಗ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಾಸುದೇವ ರಾಯ್ಕರ್ ಪ್ರಾಸ್ತಾವಿಕ ಮಾತನಾಡಿದರು. ಪ್ರೇರಣಾ ಸಂಸ್ಥೆ ಅಧ್ಯಕ್ಷೆ ಚೇತನಾ ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎನ್.ಕೆ.ಕೊಟ್ರೇಶ, ಡಿಎಚ್‌ಓ ನಾಗರಾಜ್, ಡಾ.ಯು.ಸಿದ್ದೇಶ್, ಶಿವಕುಮಾರ್, ಮರಿಯೋಜಿರಾವ್ ಮತ್ತಿತರರು ಹಾಜರಿದ್ದರು.