ಕೋಲ್ಕತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಆಘಾತ ಶಾಕ್ ಎದುರಾಗಿದ್ದು, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದ ಲಕ್ಷ್ಮಿ ರತನ್ ಶುಕ್ಲಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ತೃಣಮೂಲ ಕಾಂಗ್ರೆಸ್ ಪಕ್ಷ ತೊರೆಯುತ್ತಿರುವ ಮುಖಂಡರ ಪಟ್ಟಿ ಬೆಳೆಯುತ್ತಿದ್ದು, ಈ ಪಟ್ಟಿಗೆ ಇದೀಗ ಲಕ್ಷ್ಮಿ ರತನ್ ಶುಕ್ಲಾ ಸೇರ್ಪಡೆಯಾಗಿದ್ದಾರೆ.
ಮಾಜಿ ಕ್ರಿಕೆಟಿಗರೂ ಕೂಡ ಆಗಿರುವ ಲಕ್ಷ್ಮಿ ರತನ್ ಶುಕ್ಲಾ ಇಂದು ಹೌರಾದಲ್ಲಿರುವ ಟಿಎಂಸಿ ಕಚೇರಿಗೆ ತೆರಳಿ ಟಿಎಂಸಿ ಜಿಲ್ಲಾಧ್ಯಕ್ಷರಿಗೆ ತಮ್ಮ ರಾಜಿನಾಮೆ ಸಲ್ಲಿಕೆ ಮಾಡಿದ್ದಾರೆ. ಲಕ್ಷ್ಮಿ ರತನ್ ಶುಕ್ಲಾ ಅವರು ಸುವೆಂದು ಅಧಿಕಾರಿಯ ನಂತರ ಮಮತಾ ಬ್ಯಾನರ್ಜಿ ಸಂಪುಟಕ್ಕೆ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದಾರೆ. ಪಶ್ಚಿಮ ಬಂಗಾಳದ ಮಾಜಿ ಸಾರಿಗೆ ಮತ್ತು ನೀರಾವರಿ ಸಚಿವರಾಗಿದ್ದ ಸುವೆಂದು ಅಧಿಕಾರಿ ಅವರು 2020 ಡಿಸೆಂಬರ್ 19 ರಂದು ಟಿಎಂಸಿ ತೊರೆದು ಬಿಜೆಪಿಗೆ ಸೇರಿದ್ದರು.